ಸಿನಿವಾಣಿ

ಯುವನಟಿ ಚೇತನಾ ಸಾವು ಪ್ರಕರಣ; ಕೇಸು ದಾಖಲು, ಮುಂದಿನ ಕ್ರಮಗಳಿವು...

ಬೆಂಗಳೂರು: ಸರ್ಜರಿ ಮಾಡಿಸಿಕೊಳ್ಳಲೆಂದು ಹೋಗಿದ್ದ ಕಿರುತೆರೆಯ ಯುವನಟಿ ಚೇತನಾ ರಾಜ್​ ಸಾವಿಗೆ ಸಂಬಂಧಿಸಿದಂತೆ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯದಲ್ಲೇ ಸಂಬಂಧಪಟ್ಟ ವೈದ್ಯರಿಗೆ ನೋಟಿಸ್ ಜಾರಿ ಮಾಡುವ ಜತೆಗೆ ವಿಚಾರಣೆಯನ್ನೂ ನಡೆಸಲಿದ್ದಾರೆ.

ನಗರದ ನವರಂಗ್ ಸರ್ಕಲ್​ನಲ್ಲಿರುವ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಸ್ಥೂಲಕಾಯಕ್ಕೆ ಚಿಕಿತ್ಸೆ ಪಡೆದಿದ್ದ ಚೇತನಾ ಬಳಿಕ ಸಾವಿಗೀಡಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಚೇತನಾ ಮೃತಪಟ್ಟಿದ್ದಾಳೆ ಎಂದು ಕುಟುಂಬ ಆರೋಪ ಮಾಡಿದೆ.

ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಇಲ್ಲದೆ ಸರ್ಜರಿಗೆ ಮುಂದಾಗಿದ್ದ ವೈದ್ಯರ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.

ಘಟನೆ ಕುರಿತಾಗಿ ಬೆಂಗಳೂರಿನ ಸುಬ್ರಹ್ಮಣ್ಯಪುರದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಸಂಬಂಧಪಟ್ಟ ವೈದ್ಯರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯಲಿದ್ದಾರೆ. ಈ ಮಧ್ಯ ಮರಣೋತ್ತರ ಪರೀಕ್ಷೆ ವರದಿ ಬಳಿಕ ಅದನ್ನು ಮೆಡಿಕಲ್ ಕೌನ್ಸಿಲ್​ಗೆ ಕಳಿಸಿಕೊಟ್ಟು ತನಿಖೆ ನಡೆಸಲಿದ್ದಾರೆ. ವೈದ್ಯರು ನಿರ್ಲಕ್ಷ್ಯ ವಹಿಸಿದ್ದು ಕಂಡುಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಗೀತಾ, ದೊರೆಸಾನಿ ಹಾಗೂ ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಚೇತನಾ, ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ.