ಸಿನಿವಾಣಿ

ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ ಪಿಎಂ ನರೇಂದ್ರ ಮೋದಿ ಸಿನಿಮಾ

manjunathktgns

ಮುಂಬೈ: ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿತ್ರಮಂದಿರಗಳು ಮತ್ತೆ ತೆರೆಯುವುದಕ್ಕೆ ತಯಾರಾಗಿವೆ. ಸಿನಿಮಾ ಪ್ರದರ್ಶನಕ್ಕೆ ಪ್ರದರ್ಶಕರು ಅಣಿಯಾಗುತ್ತಿದ್ದಾರೆ. ಅದೇ ರೀತಿ ಈ ಹಿಂದೆ ಲಾಕ್​ಡೌನ್​ ಸಮಯದಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಇದೀಗ ಮರು ಬಿಡುಗಡೆಗೆ ಸಜ್ಜಾಗಿದೆ. ಅದೆಲ್ಲದರ ನಡುವೆ ಕಳೆದ ವರ್ಷ ತೆರೆಕಂಡಿದ್ದ ಪಿಎಂ ನರೇಂದ್ರ ಮೋದಿ ಸಿನಿಮಾ ಸಹ ಮರು ಬಿಡುಗಡೆಯ ಸಾಲಿನಲ್ಲಿದೆ.

2019 ಮೇ 24ರಂದು ಪಿಎಂ ನರೇಂದ್ರ ಮೋದಿ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಿತ್ತು. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಸಿನಿಮಾ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. ಹಾಗಾಗಿ ಇದೀಗ ಮತ್ತೆ ಮರು ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದಾರೆ. ಅದರಂತೆ ಅಕ್ಟೋಬರ್​ 15ರಂದು ಬಿಡುಗಡೆ ಮಾಡಲು ದಿನಾಂಕವನ್ನೂ ನಿಗದಿ ಮಾಡಿದ್ದಾರೆ.

ಓಮಂಗ್​ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಮೋದಿಯಾಗಿ ವಿವೇಕ್​ ಓಬೇರಾಯ್​ ನಟಿಸಿದ್ದರು. ಅವರ ಜತೆಗೆ ಬೋಮನ್ ಇರಾನಿ, ಮನೋಜ್​ ಜೋಶಿ, ಪ್ರಶಾಂತ್​ ನಾರಾಯಣ್ ಸೇರಿ ಹಲವು ಕಲಾವಿದರಿದ್ದರು. ಸುರೇಶ್ ಓಬೇರಾಯ್​, ಸಂದೀಪ್​ ಸಿಂಗ್​, ಆನಂದ್​ ಪಂಡಿತ್​ ಚಿತ್ರ ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್​)