ಸಿನಿವಾಣಿ

ಆಸ್ಪತ್ರೆಯಲ್ಲಿದ್ದ ಸಲ್ಮಾನ್ ಖಾನ್ ಫೋಟೋ ವೈರಲ್; ಸೆಲೆಬ್ರಿಟಿಗಳಿಗೆ ಪ್ರೈವೆಸಿ ಇಲ್ವಾ?

ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಕೈಗೆ ಹಾವು ಕಚ್ಚಿದ್ದು, ಕೂಡಲೇ ಸಲ್ಮಾನ್ ಖಾನ್ ಅವರನ್ನು ನವಿ ಮುಂಬೈನ ಕಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಹಾಗೆ, ಪನ್ವೇಲ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್​ ಖಾನ್​ಗೆ ಶನಿವಾರ ಮಧ್ಯರಾತ್ರಿ ಹಾವು ಕಚ್ಚಿತ್ತು. ವಿಷ ರಹಿತ ಹಾವಾಗಿದ್ದರಿಂದ ನಟ ಸಲ್ಮಾನ್​ ಅವರ ಆರೋಗ್ಯ ಅಷ್ಟಾಗಿ ಬಾಧಿಸಿಲ್ಲ ಎನ್ನಲಾಗಿದೆ. ಸದ್ಯ, ನಟ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ. ಆದರೆ, ನಟ ಸಲ್ಮಾನ್ ಎಂಜಿಎಂ ಆಸ್ಪತ್ರೆಯಲ್ಲಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಆಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಛಾಯಾಗ್ರಾಹಕ ವರೀಂದರ್ ಚಾವ್ಲಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಮೊದಲು ಹಂಚಿಕೊಂಡಿದ್ದು, ಇದರಲ್ಲಿ ಸಲ್ಮಾನ್ ಚಿಕಿತ್ಸೆ ಪಡೆಯುತ್ತಿರುವುದನ್ನು ಕಾಣಬಹುದಾಗಿದೆ. ಫೋಟೋವನ್ನು ಹಂಚಿಕೊಂಡ ವರೀಂದರ್, "ಆಸ್ಪತ್ರೆಯಲ್ಲಿದ್ದ @beingsalmankhan ಅವರ ಚಿತ್ರ" ಎಂದು ಕ್ಯಾಪ್ಷನ್ ನೀಡಿದ್ದಾರೆ. ಆದರೆ, ಇದು ಕೆಲವು ಸೆಲೆಬ್ರಿಟಿಗಳಿಗೆ ಕೋಪ ತಂದಿದೆ. ಹೌದು, ಚಲನಚಿತ್ರ ನಿರ್ಮಾಪಕ ಸಂಜಯ್ ಗುಪ್ತಾ ಅವರು ಆಸ್ಪತ್ರೆಯಲ್ಲಿದ್ದ ನಟ ಸಲ್ಮಾನ್ ಅವರ ವೈರಲ್ ಫೋಟೋವನ್ನು ಟೀಕಿಸಿದರು. ಸಂಜಯ್ ಅವರು, ''ಆಸ್ಪತ್ರೆಯಲ್ಲಿದ್ದ ಸಲ್ಮಾನ್ ಫೋಟೋ ವೈರಲ್ ಆಗುತ್ತಿದೆ... ಜನರು ಯಾಕೆ ಹೀಗೆ ಮಾಡುತ್ತಾರೆ? ಸೆಲೆಬ್ರಿಟಿಗಳಿಗೆ ಪ್ರೈವೆಸಿನೇ ಇಲ್ಲವೇ?'', ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ... ಇಂದು ಅಂದರೆ ಡಿ.27 ರಂದು ನಟ ಸಲ್ಮಾನ್ ಅವರ ಹುಟ್ಟು ಹಬ್ಬ ಆಗಿರುವುದರಿಂದ ನಟನಿಗೆ ಶುಭಾಶಯಗಳು ಹರಿದುಬಂದಿವೆ.