ಬೆಂಗಳೂರು: ‘ಕಿಚ್ಚ’ ಸುದೀಪ್ ನಟಿಸಿರುವ ‘ಫ್ಯಾಂಟಮ್ ಚಿತ್ರದ ಶೀರ್ಷಿಕೆ ‘ವಿಕ್ರಾಂತ್ ರೋಣ’ ಎಂದು ಬದಲಾಗಲಿದೆ ಎಂದು ಇದೇ ಪುಟದಲ್ಲಿ ಓದಿದ್ದೀರಿ. ಇದೀಗ ಆ ಸುದ್ದಿ ನಿಜವಾಗಿದ್ದು, ಹೊಸ ಶೀರ್ಷಿಕೆ ಘೋಷಣೆ ಜತೆಗೆ ಮತ್ತಷ್ಟು ವಿಚಾರಗಳನ್ನು ಗುರುವಾರ ‘ವಿಕ್ರಾಂತ್ ರೋಣ’ ತಂಡ ಹೇಳಿಕೊಂಡಿದೆ. 31ರಂದು ದುಬೈನ ಬುರ್ಜ್ ಖಲೀಫಾದ ಮೇಲೆ 2000 ಅಡಿಯ ವರ್ಚುವಲ್ ಕಿಚ್ಚನ ಕಟೌಟ್ ಬಿತ್ತರವಾಗಲಿದೆ.
ಸಿನಿಮಾ ಇತಿಹಾಸದಲ್ಲೇ ಈ ತರಹದ ಪ್ರಯತ್ನ ಇದೇ ಮೊದಲ ಬಾರಿಗೆ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಈ ಮೂಲಕ ಸುದೀಪ್ ಅವರ 25 ವರ್ಷಗಳ ವೃತ್ತಿ ಜೀವನಕ್ಕೆ ವಿಶೇಷ ಉಡುಗೊರೆ ನೀಡುತ್ತಿದೆ ತಂಡ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ವಿಕ್ರಾಂತ್ ರೋಣನಾಗಿ ಸುದೀಪ್ ನಟಿಸಿದ್ದಾರೆ.