ಸಿನಿವಾಣಿ

ನಿಮ್ಮ ಸೋಲನ್ನೂ ಪ್ಲಾನ್​ ಮಾಡೋ ಜನರಿದ್ದಾರೆ: ರವೀನಾ ಟಂಡನ್​

ಸುಶಾಂತ್​ ಸಾವಿನ ನಂತರ ರವೀನಾ ಟಂಡನ್​, ಚಿತ್ರರಂಗದಲ್ಲಿ ಸ್ಟ್ರಗಲ್​ ಮಾಡುವುದು ಎಷ್ಟು ಕಷ್ಟ ಎಂಬ ವಿಷಯವನ್ನು ಸೋಷಿಯಲ್​ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಹೀರೋಗಳು, ಅವರ ಗರ್ಲ್​ಫ್ರೆಂಡ್​ಗಳು, ಮಾಧ್ಯಮದವರು ... ಹೇಗೆಲ್ಲಾ ಒಬ್ಬ ಕಲಾವಿದನನ್ನು ತುಳಿಯುತ್ತಾರೆ ಎಂಬುದನ್ನು ಬರೆದುಕೊಂಡಿದ್ದರು.

ಈಗ ಈ ವಿಷಯವಾಗಿ ಅವರು ಇನ್ನಷ್ಟು ಮಾತನಾಡಿದ್ದಾರೆ. ಮಾತನಾಡಿದ್ದಾರೆ ಎನ್ನುವುದಕ್ಕಿಂತ ಅವರು ತಮ್ಮ ಅನಿಸಿಕೆಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಮುಕ್ತವಾಗಿ ಹಂಚಿಕೊಂಡಿದ್ದಾರೆ.

'ಸುಶಾಂತ್​ ಸಿಂಗ್​ ಸಾವಿನ ಮೂರು ವಾರಗಳ ನಂತರವು, ಚರ್ಚೆ ನಡೆಯುತ್ತಲೇ ಇದೆ. ಇದನ್ನು ದೊಡ್ಡ ವಿಷಯ ಮಾಡಬೇಡಿ. ಇಲ್ಲಿ ಯಾರನ್ನೂ ದೂಷಿಸುವುದಕ್ಕೆ ಸಾಧ್ಯವಿಲ್ಲ. ಚಿತ್ರರಂಗ ಇರುವುದೇ ಹೀಗೆ. ಇತ್ತೀಚೆಗೆ, ಒಂದು ವಾಟ್ಸಪ್​ ಮೆಸೇಜ್​ನಲ್ಲಿ ಕರಣ್​ ಜೋಹಾರ್​ ಬೇಕಂತಲೆ ಸುಶಾಂತ್​ ಸಿಂಗ್​ ಜತೆಗೆ ಒಂದು ಕೆಟ್ಟ ಸಿನಿಮಾ ಮಾಡಿ ಅವರನ್ನು ಹಾಳು ಮಾಡಿದರು ಎಂದು ಆರೋಪಿಸಲಾಗಿದೆ. ಒಬ್ಬ ನಿರ್ಮಾಪಕ ಯಾಕೆ ಕೋಟ್ಯಂತರ ರೂಪಾಯಿ ಮತ್ತು ಅಮೂಲ್ಯ ಸಮಯವನ್ನು ಖರ್ಚು ಮಾಡಿ, ಒಂದು ಕೆಟ್ಟ ಸಿನಿಮಾ ಮಾಡುತ್ತಾನೆ? ಹಾಗೆಲ್ಲಾ ಯಾರೂ ಮಾಡುವುದಿಲ್ಲ. ಈ ತರಹದ ಆರೋಪಗಳು ಆಧಾರರಹಿತ' ಎಂದು ಅವರು ಹೇಳಿಕೊಂಡಿದ್ದಾರೆ.

ಹಾಗಂತ ಇಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ರವೀನಾ, 'ಇಲ್ಲಿ ತುಂಬಾ ರಾಜಕೀಯವಿದೆ. ಒಳ್ಳೆಯ ಜನರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಆ ಕೆಟ್ಟವರು ನಿಮ್ಮ ಸೋಲನ್ನು ಪ್ಲಾನ್​ ಮಾಡುತ್ತಾರೆ. ಇದು ನನ್ನ ಸ್ವಂತ ಅನುಭವ. ನೀವು ಸೋಲುವುದನ್ನು ಅವರು ಇಷ್ಟಪಡುತ್ತಾರೆ. ಹಾಗಂತ ಇದು ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ರಂಗಗಳಲ್ಲೂ ಇದೆ. ಆದರೆ, ಇಲ್ಲಿ ಗ್ಲಾಮರ್​, ಹಣ ಎಲ್ಲವೂ ಹೆಚ್ಚಾಗಿರುವುದರಿಂದ ಹೈಲೈಟ್​ ಆಗುತ್ತದೆ' ಎಂದು ಅಭಿಪ್ರಾಯಪಡುತ್ತಾರೆ.

ಈ ವಿಷಯವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, 'ಬಹಳ ಹಿಂದೆ ನಾನು ಒಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದೆ. ಒಂದು ಸಂಜೆ ಚಿತ್ರದ ಮುಹೂರ್ತ ನಿಗದಿಯಾಗಿತ್ತು. ನಾನು ಚಿತ್ರದ ಲಾಂಚ್​ಗೆ ತಯಾರಾಗುತ್ತಿರುವಾಗಲೇ, ಚಿತ್ರತಂಡದಿಂದ ನನಗೊಂದು ಫೋನ್​ ಬಂತು. ನನ್ನನ್ನು ಚಿತ್ರದಿಂದ ತೆಗೆದು ಹೊರಹಾಕಲಾಗಿದೆಯೆಂದೂ, ಆದಷ್ಟು ಬೇಗ ಅಡ್ವಾನ್ಸ್​ ವಾಪಸ್ಸು ಕೊಡಬೇಕೆಂದು ಹೇಳಲಾಯಿತು. ನಾನು ನಿಜಕ್ಕೂ ಶಾಕ್​ ಆಗಿದ್ದೆ. ಇದ್ದಕ್ಕಿದ್ದಂತೆ ನನ್ನನ್ನು ಯಾಕೆ ಕಿತ್ತು ಹಾಕಿದರು ಎಂದು ಸ್ವಲ್ಪ ಹುಡುಕಾಡಿದಾಗ, ನಾಯಕನ ಗರ್ಲ್​ಫ್ರೆಂಡ್​ಗೆ ನಾನು ಇಷ್ಟವಾಗಲಿಲ್ಲ ಎಂದು ಗೊತ್ತಾಯಿತು' ಎಂದು ರವೀನಾ ಹೇಳಿದ್ದಾರೆ.

ಈ ತರಹದ ಸಮಸ್ಯೆಗಳು ಚಿತ್ರರಂಗದಲ್ಲಿ ಎಲ್ಲರಿಗೂ ಆಗುತ್ತದೆ ಎಂದು ಹೇಳಿಕೊಂಡಿರುವ ಅವರು, 'ಇಂಥ ಸಮಸ್ಯೆಗಳು ರಾಜ್​ ಕಪೂರ್​ ಕುಟುಂಬವನ್ನೂ ಬಿಟ್ಟಿಲ್ಲ. ಇಲ್ಲವಾಗಿದ್ದರೆ, ಎಷ್ಟೋ ಸ್ಟಾರ್ ಮಕ್ಕಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್​ಗಳಾಗಿ ಮೆರೆಯುತ್ತಿದ್ದರು' ಎಂಬುದು ರವೀನಾ ಅಭಿಪ್ರಾಯ.