ಬೆಂಗಳೂರು: ‘ಕಥಾ ಸಂಗಮ’ ನಂತರ ಕನ್ನಡದಲ್ಲೂ ಕ್ರಮೇಣ ಆಂಥಾಲಜಿ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ಸದ್ಯಕ್ಕೆ, ಎರಡು ಆಂಥಾಲಜಿ ಸಿನಿಮಾಗಳು ತಯಾರಾಗುತ್ತಿದ್ದು, ಈ ಪೈಕಿ ಗುರು ದೇಶಪಾಂಡೆ ನೇತೃತ್ವದಲ್ಲಿ ತಯಾರಾಗುತ್ತಿರುವ ‘ಪೆಂಟಗನ್’ ಚಿತ್ರ ಸಹ ಒಂದು. ‘ಪೆಂಟಗನ್’ ಐದು ಕಥೆಗಳನ್ನು ಒಳಗೊಂಡಿರುವ ಒಂದು ಸಿನಿಮಾ. ಐದು ಕಥೆಗಳನ್ನು ಐವರು ನಿರ್ದೇಶಕರು ನಿರ್ದೇಶಿಸಿದ್ದಾರೆ. ಐದೂ ಕಥೆಗಳ ಕಥಾವಸ್ತು ಬೇರೆಯಾಗಿದ್ದರೂ, ಎಲ್ಲದರಲ್ಲೂ ಒಂದು ಸಾಮಾನ್ಯ ವಿಷಯ ಅಡಕವಾಗಿದೆಯಂತೆ. ಈ ವಿಷಯವೇ ಎಲ್ಲ ಕಥೆಗಳಿಗೂ ಒಂದು ಕಾಮನ್ ಕೊಂಡಿಯಾಗಿರುತ್ತದೆ ಎನ್ನುತ್ತಾರೆ ಈ ಚಿತ್ರದ ನಿರ್ಮಾಣ ಮಾಡುವುದರ ಜತೆಗೆ ಒಂದು ಕಥೆಯ ನಿರ್ದೇಶನವನ್ನೂ ಮಾಡಿರುವ ಗುರು ದೇಶಪಾಂಡೆ.
ಒಂದು ಕಥೆಯನ್ನು ಗುರು ನಿರ್ದೇಶಿಸಿದರೆ, ಉಳಿದ ನಾಲ್ಕು ಕಥೆಗಳನ್ನು ಆಕಾಶ್ ಶ್ರೀವತ್ಸ, ರಘು ಶಿವಮೊಗ್ಗ, ಚಂದ್ರಮೋಹನ್ ಮತ್ತು ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಐದು ಕಥೆಗಳ ಥೀಮ್ ಪೋಸ್ಟರ್ಗಳನ್ನು ರಚಿತಾ ರಾಮ್ ಹರಿಪ್ರಿಯಾ, ಧನಂಜಯ್ ಮತ್ತು ರಿಷಬ್ ಶೆಟ್ಟಿ ಬಿಡುಗಡೆ ಮಾಡಿದರೆ, ಚಿತ್ರದ ಮೋಷನ್ ಪೋಸ್ಟರ್ಅನ್ನು ಉಪೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈಗಾಗಲೇ ಐದು ಕಿರುಚಿತ್ರಗಳ ಪೈಕಿ ಮೂರರ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ಮುಗಿದಿದ್ದು, ಸದ್ಯದಲ್ಲೇ ಇನ್ನೆರೆಡು ಚಿತ್ರಗಳ ಚಿತ್ರೀಕರಣ ನಡೆಯಲಿದೆಯಂತೆ.