ಬೆಂಗಳೂರು: ಈ ಬಾರಿಯ ಕಾನ್ಸ್ ಚಲನಚಿತ್ರೋತ್ಸವ ರದ್ದಾಗಿರಬಹುದು. ಆದರೆ, ವಿಶ್ವದ ದೊಡ್ಡ ಚಲನಚಿತ್ರ ಮಾರುಕಟ್ಟೆ ಎಂದು ಹೆಸರಾಗಿರುವ ‘ಗೋಸ್ ಟು ಕಾನ್ಸ್’ ಜೂನ್ 23ರಂದು ನಡೆಯಲಿದೆ. ಈ ಫಿಲಂ ಬಜಾರ್ಗೆ
ಜಗತ್ತಿನ ಹಲವೆಡೆಗಳಿಂದ ಸಿನಿಮಾಗಳು ಬರಲಿದ್ದು, ಚಿತ್ರದ ವಿತರಣೆ ಮತ್ತು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದಕ್ಕೆ ಸಹಾಯವಾಗಲಿದೆ. ವಿಶೇಷವೆಂದರೆ, ‘ಗೋಸ್ ಟು ಕಾನ್ಸ್’ ಗೆ ಕನ್ನಡದ ‘ಪೆಡ್ರೋ’ ಆಯ್ಕೆಯಾಗಿದೆ.
‘ಪೆಡ್ರೋ’ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ವಿುಸಿದ್ದಾರೆ. ನಟೇಶ್ ಹೆಗಡೆ ನಿರ್ದೇಶನ ಮಾಡಿದ್ದಾರೆ. ಮಲೆನಾಡಿನ ಚಿಕ್ಕ ಹಳ್ಳಿಯ ಎಲೆಕ್ಟ್ರಿಶಿಯನ್ ಒಬ್ಬನ ಜೀವನದಲ್ಲಾಗುವ ಘಟನೆಗಳೇ ಈ ಚಿತ್ರದ ಕಥೆ. ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡುವ ನಟೇಶ್, ‘ಈ ಹಿಂದೆ ‘ಕುರ್ಲಿ’ ಮತ್ತು ‘ನಮಗೆ ನಾವು’ ಎಂಬ ಕಿರುಚಿತ್ರಗಳನ್ನು ಮಾಡಿದ್ದೆ. ಅದನ್ನು ರಾಜ್ ಬಿ. ಶೆಟ್ಟಿ ನೋಡಿದ್ದರು. ಒಳ್ಳೆಯ ಕಥೆ ಇದ್ದರೆ ಹೇಳಿ ಎಂದಿದ್ದರು. ಈ ಕಥೆ ಹೇಳಿದಾಗ ಅವರಿಗೆ ಇಷ್ಟವಾಗಿ, ರಿಷಬ್ ಶೆಟ್ಟಿ ಅವರನ್ನು ಪರಿಚಯ ಮಾಡಿಕೊಟ್ಟರು. ರಿಷಬ್ ಕಥೆ ಕೇಳಿ ಚಿತ್ರ ನಿರ್ವಿುಸುವುದಕ್ಕೆ ಮುಂದೆ ಬಂದರು. ಇದು ಅವರ ಶೈಲಿಯ ಚಿತ್ರ ಅಲ್ಲ. ಇದೊಂದು ಕಲಾತ್ಮಕ ಚಿತ್ರ. ಆದರೂ ಧೈರ್ಯ ಮಾಡಿ ಚಿತ್ರ ನಿರ್ವಿುಸಿದ್ದಾರೆ’ ಎನ್ನುತ್ತಾರೆ.
ಇನ್ನು ‘ಗೋಸ್ ಟು ಕಾನ್ಸ್’ ಬಗ್ಗೆ ಮಾತನಾಡುವ ನಟೇಶ್, ‘ಈ ಬಜಾರ್ನಲ್ಲಿ ಜಗತ್ತಿನಾದ್ಯಂತ ವಿತರಕರು ಮತ್ತು ಚಿತ್ರೋತ್ಸವದ ಮಂದಿ ಭಾಗವಹಿಸಲಿದ್ದಾರೆ. ಇದರಿಂದ ಚಿತ್ರಕ್ಕೆ ಹೊರಗಡೆ ಮಾರುಕಟ್ಟೆ ಓಪನ್ ಆಗಲಿದೆ’ ಎನ್ನುತ್ತಾರೆ ನಟೇಶ್. ‘ಪೆಡ್ರೋ’ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸದ್ಯಕ್ಕೆ ಗ್ರೇಡಿಂಗ್ ಕೆಲಸ ಮಾತ್ರ ಬಾಕಿ ಇದೆ. ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಗೋಪಾಲ ಹೆಗಡೆ, ರಾಮಕೃಷ್ಣ ಭಟ್, ಮೇಧಿನಿ ಕೆಳಮನೆ , ನಾಗರಾಜ ಹೆಗಡೆ ಮುಂತಾದವರು ನಟಿಸಿದ್ದಾರೆ.