ಸಿನಿವಾಣಿ

ಪಾಯಲ್‌ಗೆ ಬೇಕಿದೆ ‘ನಿಮ್ಮೆಲ್ಲರ ಆಶೀರ್ವಾದ’; ಭಿನ್ನ ಬೆಡಗಿಯ ವಿಭಿನ್ನ ಸಿನಿಮಾ

ಬೆಂಗಳೂರು: ಶೀರ್ಷಿಕೆ ಮೂಲಕವೇ ಗಮನಸೆಳೆಯುತ್ತಿವೆ ಇತ್ತೀಚಿನ ಸಿನಿಮಾಗಳು. ಇದೀಗ ಆ ಬುಟ್ಟಿಗೆ ‘ನಿಮ್ಮೆಲ್ಲರ ಆಶೀರ್ವಾದ’ ಎಂಬ ಸಿನಿಮಾ ಸೇರ್ಪಡೆಗೊಂಡಿದೆ. ಈ ಚಿತ್ರಕ್ಕೆ ಪ್ರತೀಕ್ ಶೆಟ್ಟಿ ನಾಯಕನಾಗಿ ನಟಿಸಿದರೆ, ಅವರಿಗೆ ಪಾಯಲ್ ರಾಧಾಕೃಷ್ಣ ಜೋಡಿಯಾಗಿದ್ದಾರೆ.

ಬೇಜವಾಬ್ದಾರಿತನದಿಂದ ವರ್ತಿಸುವ ಪೊಲೀಸ್ ಆಫೀಸರ್ ಒಬ್ಬನ ಜೀವನದಲ್ಲಿ ಹುಡುಗಿಯೊಬ್ಬಳ ಆಗಮನದಿಂದ ಹೇಗೆ ಬದಲಾಗುತ್ತಾನೆ ಎಂಬುದೇ ಈ ಚಿತ್ರದ ಕಥೆ. ರವಿಕಿರಣ್ ನಿರ್ದೇಶನ ಮಾಡಿರುವ ಈ ಚಿತ್ರವನ್ನು ವರುಣ್ ಹೆಗ್ಡೆ ನಿರ್ಮಾಣ ಮಾಡಿದ್ದು, ಈಗಾಗಲೇ ಶೂಟಿಂಗ್ ಸಹ ಮುಗಿದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ.

‘ಲಾಕ್‌ಡೌನ್‌ಗೂ ಮುಂಚೆ ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ಅದಾದ ಬಳಿಕ ಇತ್ತೀಚೆಗೆ ಒಂದಷ್ಟು ಸಣ್ಣ ಪುಟ್ಟ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು. ಇಡೀ ಸಿನಿಮಾ ಮಂಗಳೂರಿನ ಸುತ್ತಮುತ್ತ ನಡೆಯಲಿದ್ದು, ಬಹುತೇಕ ಆ ಭಾಗದ ಕಲಾವಿದರು ಮತ್ತು ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದ ಭಾಷಾ ಸೊಗಡು ಕರಾವಳಿಯದ್ದೇ ಇರಲಿದೆ’ ಎಂದು ಮಾಹಿತಿ ನೀಡುತ್ತಾರೆ ಪಾಯಲ್.

ಅಂದಹಾಗೆ, ಸರವಣನ್ ಜಿ.ಎನ್ ಛಾಯಾಗ್ರಹಣ, ಸುನಾದ್ ಗೌತಮ್ ಸಂಗೀತ, ಸುರೇಶ್ ಆರ್ಮುಗಂ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಕಾನ್‌ಸ್ಟೇಬಲ್ ಪಾತ್ರ ನಿಭಾಯಿಸಿದ್ದಾರೆ. ಇನ್ನು, ಪಾಯಲ್ ಅವರ ಬೇರೆ ಸಿನಿಮಾ ವಿಚಾರಕ್ಕೆ ಬರುವುದಾದರೆ, ತೆಲುಗಿನಲ್ಲಿ ಸಿದ್ಧವಾಗುತ್ತಿರುವ ‘ಮಿಸ್ಟರ್ ವರ್ಕ್ ಫ್ರಂ ಹೋಮ್’ ಚಿತ್ರದ ಬಹುತೇಕ ಶೂಟಿಂಗ್ ಮುಗಿಸಿದ್ದಾರೆ. ಕನ್ನಡದ ಎರಡು ಸಿನಿಮಾಗಳ ಕಥೆ ಕೇಳಿದ್ದು, ಶೀಘ್ರದಲ್ಲಿಯೇ ಆ ಚಿತ್ರಗಳಿಗೂ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ತಮಿಳಿನ ಒಂದು ಸಿನಿಮಾದಲ್ಲಿಯೂ ಪಾಯಲ್ ನಟಿಸುತ್ತಿದ್ದಾರೆ.