ಸಿನಿವಾಣಿ

ಅನುರಾಗ್​ಗೆ ಮಂಪರು ಪರೀಕ್ಷೆ ಮಾಡಿ ... ಪಾಯಲ್​ ಡಿಮ್ಯಾಂಡ್​

ಮುಂಬೈ: ಪಾಯಲ್​ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದ ಸಮಯದಲ್ಲಿ ತಾವು ಭಾರತದಲ್ಲೇ ಇರಲಿಲ್ಲ, ಶ್ರೀಲಂಕಾದಲ್ಲಿ ಶೂಟಿಂಗ್ ಮಾಡುತ್ತಿದ್ದೆ ಎಂದು ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ಹೇಳಿರುವುದು, ಅಪ್ಪಟ ಸುಳ್ಳು ಎಂದು ನಟಿ ಪಾಯಲ್​ ಘೋಶ್ ಹೇಳಿದ್ದಾರೆ. ಅನುರಾಗ್​ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ, ನಿಜ ತನ್ನಿಂತಾನೇ ಹೊರಬರುತ್ತದೆ ಎಂಬುದನ್ನು ಸಹ ಅವರು ಹೇಳಿದ್ದಾರೆ.

2013ರಲ್ಲಿ ಅನುರಾಗ್​ ಕಶ್ಯಪ್​ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್​ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್​ ಸ್ಟೇಶನ್​ನಲ್ಲಿ ದೂರು ದಾಖಲಿಸಿದ್ದರು. ಆದರೆ, ವರ್ಸೋವಾ ಪೊಲೀಸರು ಇನ್ನೂ ಅನುರಾಗ್​ ವಿಚಾರಣೆ ಮಾಡಿಲ್ಲ ಎಂದು ಬೇಸರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಅನುರಾಗ್​ ವಿರುದ್ಧ ಸೂಕ್ತ ಆ್ಯಕ್ಷನ್​ ತೆಗೆದುಕೊಳ್ಳಿದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಸಿದ್ದರು.

ಅದಕ್ಕೆ ಸರಿಯಾಗಿ, ಮುಂಬೈ ಪೊಲೀಸರು ಅನುರಾಗ್​ಗೆ ಸಮನ್ಸ್​ ನೀಡಿ ಗುರುವಾರ ಕರೆಸಿಕೊಂಡಿದ್ದರು. ಸುಮಾರು ಎಂಟು ತಾಸುಗಳ ಕಾಲ ಗ್ರಿಲ್​ ಮಾಡಿದ್ದರು. ಈ ಸಂದರ್ಭದಲ್ಲಿ, ಪಾಯಲ್​ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದ ಸಮಯದಲ್ಲಿ ತಾವು ಭಾರತದಲ್ಲೇ ಇರಲಿಲ್ಲ, ಶ್ರೀಲಂಕಾದಲ್ಲಿ ಶೂಟಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದರು.

ಇದರ ವಿರುದ್ಧ ಪಾಯಲ್​ ಇನ್ನೊಂದು ಅರ್ಜಿ ಹಾಕುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಅದರ ಪ್ರಕಾರ, ಅನುರಾಗ್​ ಕಶ್ಯಪ್​ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಈ ಅರ್ಜಿಯಲ್ಲಿ ಅವರು ಬರೆದಿದ್ದು, ಮಂಪರು ಪರೀಕ್ಷೆ ಮಾಡಿದರೆ ನಿಜಾಂಶ ತನ್ನಿಂತಾನೇ ಬೆಳಕಿಗೆ ಬರುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.