ಮುಂಬೈ: ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರವು ಕಳೆದ ಆರು ದಿನಗಳಲ್ಲಿ ಜಗತ್ತಿನಾದ್ಯಂತ 500 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಾಕಷ್ಟು ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಮತ್ತು ಬಾಲಿವುಡ್ಗೆ ಹೊಸ ಉಸಿರು ನೀಡಿದೆ. ಈ ಚಿತ್ರದ ಯಶಸ್ಸಿನಿಂದಾಗಿ ಪ್ರೇಕ್ಷಕರು ಬಾಲಿವುಡ್ ಮಂದಿಯನ್ನು ಕೈಬಿಟ್ಟಿಲ್ಲ ಎಂದು ಸಾಬೀತಾಗಿದೆ.
ಆದರೆ, ಶಾರುಖ್ ಚಿತ್ರವೊಂದು 500 ಕೋಟಿ ರೂ. ಗಳಿಗೆ ಮಾಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಇದರಲ್ಲಿ ವಿಶೇಷತೆ ಏನಿದೆ ಹೇಳಿ? ಯಶ್ ಎಂಬ ಅನಾಮಿಕನೊಬ್ಬ 'ಕೆಜಿಎಫ್ 2' ಚಿತ್ರದ ಮೂಲಕ 500 ಕೋಟಿ ರೂ. ಬಿಜಿನೆಸ್ ಮಾಡಿದರೆ, ಶಾರುಖ್ ಖಾನ್ ಎಂಬ ಸ್ಟಾರ್ ನಟ ಈ ತರಹದ ಬಿಜಿನೆಸ್ ಮಾಡುವುದರಲ್ಲಿ ಯಾವುದೇ ದೊಡ್ಡಸ್ತಿಕೆ ಇಲ್ಲ' ಎಂದಿದ್ದಾರೆ.
ಯಶ್ಗಿಂತ ಶಾರುಖ್ ದೊಡ್ಡ ಹೆಸರು. ಯಶ್ ಆ ತರಹದ್ದೊಂದು ಬಿಜಿನೆಸ್ ಮಾಡಬಹುದಾದರೆ, 'ಕಾಂತಾರ' ಎಂಬ ಚಿತ್ರ ದೊಡ್ಡ ಹಿಟ್ ಆಗಬಹುದಾದರೆ ಅಥವಾ ಅಲ್ಲು ಅರ್ಜುನ್ ಹೆಸರೇ ಗೊತ್ತಿಲ್ಲದಿರುವವರು 'ಪುಷ್ಪ' ಚಿತ್ರ ನೋಡಿ ಗೆಲ್ಲಿಸುವುದಾದರೆ, ಮೊದಲಿನ ತರಹ ಈ ಸ್ಟಾರ್ಗಿರಿ ಎಲ್ಲ ಇನ್ನೂ ಉಳಿದಿದೆಯೇ ಎಂಬ ಸಂಶಯ ಕಾಡುತ್ತದೆ' ಎಂದು ಹೇಳಿದ್ದಾರೆ.