ಸಿನಿವಾಣಿ

ನಟಿಯಾಗುವ ಮುನ್ನ ಪರಿಣೀತಿ ಚೋಪ್ರಾ ಏನು ಮಾಡುತ್ತಿದ್ದರು ಗೊತ್ತಾ?

ಮುಂಬೈ: ಪ್ರತಿಯೊಬ್ಬ ನಟ-ನಟಿ ಸಹ ಚಿತ್ರರಂಗಕ್ಕೆ ಬರುವುದಕ್ಕಿಂತ ಮುನ್ನ, ಬೇರೇನೋ ಕೆಲಸ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ನೇರವಾಗಿ ಚಿತ್ರರಂಗಕ್ಕೆ ಬಂದರೂ, ಅಲ್ಲಿ ಬೇರೇನೋ ಮಾಡಿಕೊಂಡು, ಅಭಿನಯದತ್ತ ವಾಲಿರುತ್ತಾರೆ. ನೇರವಾಗಿ ನಾಯಕ ಅಥವಾ ನಾಯಕಿಯಾದವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆ ಎಂದೇ ಹೇಳಬೇಕು.

ಈಗ್ಯಾಕೆ ಈ ವಿಷಯವೆಂದರೆ, ನಟಿ ಪರಿಣೀತಿ ಚೋಪ್ರಾ ಸಹ ಅದೇ ಸಾಲಿಗೆ ಸೇರಿದವರು. ಇಂದು ಅವರು ಬಾಲಿವುಡ್​ನ ಬೇಡಿಕೆಯ ನಟಿ ಇರಬಹುದು. ಆದರೆ, ಅದಕ್ಕೂ ಮುನ್ನ ಅವರು ಚಿತ್ರರಂಗದಲ್ಲಿ ಬೇರೇನೋ ಕೆಲಸ ಮಾಡುತ್ತಿದ್ದರು. ಆ ಕೆಲಸ ಏನು ಎಂದು ಪರಿಣೀತಿ ಇದೀಗ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಟಿಯಾಗುವ ಮುನ್ನ ಅನೂಷ್ಕಾ ಶರ್ಮ ಅವರ ಪಿಆರ್​ಓ ಆಗಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

'ನಾನು ಮೊದಲು ಯಶ್​ರಾಜ್​ ಫಿಲಂಸ್​ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಅದರಲ್ಲೂ ಅನೂಷ್ಕಾ ಶರ್ಮ ಅವರ ಪಿಆರ್​ಓ ಆಗಿದ್ದೆ. ಮೂರು ತಿಂಗಳ ಕಾಲ ಅವರ ಜತೆಗಿದ್ದೆ. ಆ ಸಂದರ್ಭದಲ್ಲಿ ಅವರ ಸಂದರ್ಶನಗಳನ್ನು ಫಿಕ್ಸ್​ ಮಾಡುತ್ತಿದ್ದವಳು ನಾನೇ. ಆ ನಂತರ 'ಲೇಡೀಸ್​ ವರ್ಸಸ್​ ರಿಕ್ಕಿ ಬೆಹ್ಲ್​' ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿತು. ಅನೂಷ್ಕಾ ಶರ್ಮ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ನಾನು, ಮೂರೇ ತಿಂಗಳಲ್ಲಿ ಅವರ ಸಹನಟಿಯಾದೆ' ಎಂದು ನೆನಪಿಸಿಕೊಂಡಿದ್ದಾರೆ ಪರಿಣೀತಿ.