ಸಿನಿವಾಣಿ

ಡಿ.30ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದೆ ಪಾಕಿಸ್ತಾನಿ ಚಿತ್ರ …

ಮುಂಬೈ: ಭಾರತದ ಚಿತ್ರಗಳಿಗೆ ಪಾಕಿಸ್ತಾನದಲ್ಲಿ ದೊಡ್ಡ ಬೇಡಿಕೆ ಇದೆ. ಆದರೆ, ಪಾಕಿಸ್ತಾನದ ಚಿತ್ರಗಳು ಇಲ್ಲಿ ಬಿಡಗುಡೆಯಾದ ಉದಾಹರಣೆ ಇಲ್ಲ. ಈಗ 'ದಿ ಲೆಜೆಂಡ್​ ಆಫ್​ ಮೌಲಾ ಜಾಟ್​' ಎಂಬ ಪಾಕಿಸ್ತಾನಿ ಚಿತ್ರವು ಭಾರತದಲ್ಲಿ ಬಿಡುಗಡೆಯಾಗುವುದಕ್ಕೆ ತಯಾರಿ ನಡೆಸಿದ್ದು, ಮುಂದಿನ ವಾರ ಅಂದರೆ ಡಿ. 30ರಂದು ಬಿಡುಗಡೆಯಾಗಲಿದೆ.

ಆಶ್ಚಯರ್ವಾಗಬಹುದು. ಆದರೂ ಇದು ನಿಜ. 'ದಿ ಲೆಜೆಂಡ್​ ಆಫ್​ ಮೌಲಾ ಜಾಟ್​' ಚಿತ್ರವು ಪಾಕಿಸ್ತಾನದಲ್ಲಿ ಅಕ್ಟೋಬರ್​ 13ರಂದು ಬಿಡುಡೆಯಾಗಿ, ಜಗತ್ತಿನಾದ್ಯಂತ 200 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಅಷ್ಟೇ ಅಲ್ಲ, ಜಾಗತಿಕವಾಗಿ ಅಷ್ಟೊಂದು ದೊಡ್ಡ ಕಲೆಕ್ಷನ್​ ಮಾಡಿದ ಮೊದಲ ಪಾಕಿಸ್ತಾನಿ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈಗ ಈ ಚಿತ್ರವು ಭಾರತದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಪಾಕಿಸ್ತಾನದಲ್ಲಿ ತಯಾರಾದರೂ ಇದೊಂದು ಪಂಜಾಬಿ ಚಿತ್ರವಾಗಿದೆ. ಅದೇ ಕಾರಣಕ್ಕೆ ಜೀ ಸ್ಟುಡಿಯೋಸ್​ ಈ ಚಿತ್ರವನ್ನು ದೆಹಲಿ, ಪಂಜಾಬ್​ ಮುಂತಾದ ಕಡೆ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದೆ. ಚಿತ್ರದ ಕಥೆ ಉತ್ತರ ಭಾರತದ ಜನರಿಗೂ ಚಿರಪರಿಚಿತವಾಗಿರುವುದರಿಂದ, ಅಲ್ಲಿ ಬಿಡುಗಡೆ ಮಾಡಿದರೆ ಜನ ಬಂದು ಗೆಲ್ಲಿಸಬಹುದು ಎಂಬ ನಿರೀಕ್ಷೆ ಸಂಸ್ಥೆಯದ್ದು. ಅದೇ ಕಾರಣಕ್ಕೆ, ಚಿತ್ರವನ್ನು ಡಿ.30ರಂದು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವೇನಾದರೂ ಉತ್ತರ ಭಾರತದಲ್ಲಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ದಕ್ಷಿಣದಲ್ಲಿ ಬಿಡುಗಡೆ ಮಾಡುವ ಯೋಚನೆ ಜೀ ಸ್ಟುಡಿಯೋಸ್​ಗಿದೆ.

1979ರಲ್ಲಿ ಬಿಡುಗಡೆಯಾದ 'ಮೌಲಾ ಜಾಟ್​' ಎಂಬ ಯಶಸ್ವಿ ಚಿತ್ರದ ರೀಮೇಕ್​ ಆಗಿರುವ ಈ ಚಿತ್ರದಲ್ಲಿ ಫವಾದ್​ ಖಾನ್​, ಹಮ್ಜಾ ಅಲಿ ಅಬ್ಬಾಸಿ, ಹುಮೈಮಾ ಮಲಿಕ್​, ಮಾಹಿರಾ ಖಾನ್​ ಮುಂತಾದವರು ನಟಿಸಿದ್ದಾರೆ.