ಮುಂಬೈ: ನವೆಂಬರ್ 5, 2026 ರಂದು ಭಾರತೀಯ ಚಿತ್ರೋಧ್ಯಮದ ಮಟ್ಟಿಗೆ ಐತಿಹಾಸಿಕ ದಿನವಾಗಲಿದೆ. ಭರ್ತಿ 4000 ಕೋಟಿ ಬಂಡವಾಳವನ್ನು ಹೂಡಿ, ನಮಿತ್ ಮಲೋತ್ರಾ ಈ ದೇಶದ ಮಣ್ಣಿನ ಕತೆಯಾದ 'ರಾಮಾಯಣ' ವನ್ನು ವಿಶ್ವಕ್ಕೆ ಹೇಳಹೊರಟಿದ್ದಾರೆ.
ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಮೊದಲ ಭಾಗವು 2026 ರ ದೀಪಾವಳಿಗೆ ಬಿಡುಗಡೆಯಾದರೆ, ಎರಡನೇ ಭಾಗವು 2027 ರ ದೀಪಾವಳಿಗೆ ತೆರೆಕಾಣಲಿದೆ. ಈಗ ಈ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವ ಕಾರಣ, ಸಿನಿತಂಡ, ಸಿನಿಮಾದ ಭರ್ಜರಿ ಪ್ರಚಾರ ನಡೆಸುತ್ತಿದೆ.
ಈ ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾ ಮಾತೆ ಪಾತ್ರಧಾರಿ ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡುತ್ತಾ, ಇವರು ಕೆಜಿಎಫ್ ಮೂಲಕ ಇಡೀ ದೇಶಕ್ಕೆ ಪರಿಚಿತರಾದರೂ, ಟಾಕ್ಸಿಕ್ ಮೂಲಕ ಇನ್ನಷ್ಟು ಖ್ಯಾತಿಗಳಿಸಿದರು. ಈಗ ಈ ಐತಿಹಾಸಿಕ ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಇವರು ಪ್ರಪಂಚದ ಪ್ರೇಕ್ಷಕರ ಮನವನ್ನು ಮುಟ್ಟಲಿದ್ದಾರೆಂದು ನಟಿ ಹೇಳಿದ್ದಾರೆ.
ಸಾಮಾನ್ಯವಾಗಿ ಸಿನಿಮಾದ ನಾಯಕನಟರು, ಹೀರೋ ಪಾತ್ರಧಾರಿಗಳು, ಜನರಿಗೆ ಇಷ್ಟವಾಗುತ್ತಾರೆ. ಆದರೆ, ರಾಮಾಯಣದಲ್ಲಿ ರಾವಣನ ಪಾತ್ರ ಒಬ್ಬ ದುಷ್ಟನ ಪಾತ್ರವಾಗಿದೆ. ಆದರೆ ಈ ಪಾತ್ರವನ್ನು ಯಶ್ ಅವರು ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆಂದರೆ, ನೆಗೆಟಿವ್ ಪಾತ್ರವನ್ನು ಮಾಡಿದರೂ ಜನರ ಮನಸ್ಸನ್ನು ಗೆಲ್ಲಲು ಯಶ್ ಅವರಲ್ಲಿ ಮಾತ್ರ ಸಾಧ್ಯವೆಂದು ನಾನು ಹೇಳಬಲ್ಲೆ ಎಂದು ಸಾಯಿ ಪಲ್ಲವಿ ನುಡಿದಿದ್ದಾರೆ.
ಕೆಲ ದಿನಗಳ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ಯಶ್ ತಾವೇಕೆ ರಾಮಾಯಣದಲ್ಲಿ ರಾವಣದ ಪಾತ್ರವನ್ನು ಮಾಡಲು ಒಪ್ಪಿಕೊಂಡರೆಂದು ಹೇಳಿದ್ದರು. ರಾಮ, ರಾಮಾಯಣದ ನಾಯಕ ಎನ್ನುವುದು ಎಲ್ಲರಿಗೆ ತಿಳಿದಿದೆ. ಆದರೆ ರಾವಣದ ಕೆಟ್ಟತನವನ್ನು ಜನರಿಗೆ ತೋರಿಸಿದಾಗ ಮಾತ್ರ ರಾಮನ ಒಳ್ಳೆಯತನ ಜನರ ಮನಮುಟ್ಟುತ್ತದೆ.
ನಾನು ರಾವಣನ ಪಾತ್ರವನ್ನು ಮಾಡಲು ಒಪ್ಪಿಕೊಂಡಾಗಲೇ, ನಿರ್ಧರಿಸಿದ್ದೆ, ನಾನು ಈ ಪಾತ್ರವನ್ನು ಹೇಗೆ ಮಾಡಬೇಕೆಂದರೆ, ಇನ್ಯಾರು ಈ ಪಾತ್ರವನ್ನು ನಾನು ಮಾಡಿದ ರೀತಿಯಲ್ಲಿ ಮಾಡಿರಲೇಬಾರದು, ಮುಂದೆಯೂ ಮಾಡಬಾರದು. ನನ್ನ ಪಾತ್ರವನ್ನು ನೋಡಿದ ಪ್ರತಿಯೊಬ್ಬರಲ್ಲೂ ಇವನನ್ನು ಹೇಗೆ ಕೊಲ್ಲಲಿ ಎಂಬ ಭಾವನೆ ಮೂಡಬೇಕು. ಆ ರೀತಿಯಲ್ಲಿ ನಾನು ಪಾತ್ರವನ್ನು ನಿರ್ವಹಿಸಬೇಕೆಂದು ನಿರ್ಧರಿಸಿದ್ದಾಗಿ ಯಶ್ ಹೇಳಿದ್ದರು.
ನಮಿತ್ ಮಲೋತ್ರಾ ನಿರ್ಮಾಣದ, ಮನೋಜ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ರಾಮಾಯಣ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗಲಿ ಎಂದು ಸಿನಿ ತಂಡ ಈಗಾಗಲೇ ತಿಳಿಸಿದೆ. 2026 ರ ದೀಪಾವಳಿಗೆ ಸಿನಿಮಾದ ಮೊದಲ ಭಾಗ ತೆರೆಕಂಡರೆ, 2027 ರ ದೀಪಾವಳಿಗೆ ಎರಡನೇ ಭಾಗ ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ಪ್ರಭು ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮನಾಗಿ ಸನ್ನಿ ಡಿಯೋಲ್ ಮಿಂಚಲಿದ್ದಾರೆ. ಇವರು ಜೊತೆ ಪ್ರತಿಯೊಂದು ಪಾತ್ರದಲ್ಲಿ ಖ್ಯಾತನಾಮರೇ ಅಭಿನಯಿಸಲಿದ್ದು, ಈ ಸಿನಿಮಾದ ಬಜೆಟ್ ಸುಮಾರು 4,000 ಕೋಟಿ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).