ಬೆಂಗಳೂರು: ಕರೊನಾ ಸಮಯದಲ್ಲ ಓವರ್ ದಿ ಟಾಪ್ (ಓಟಿಟಿ) ಪ್ರಭಾವ ಎಷ್ಟಿತ್ತೆಂದರೆ, ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರಗಳು ಬಿಡುಗಡೆಯಾಗುವುದು ಕಡಿಮೆಯಾಗುತ್ತದೆ, ಓಟಿಟಿಯಲ್ಲಿ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ವರ್ಷ ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ನೋಡಿದರೆ, ಸದ್ಯಕ್ಕಂತೂ ಓಟಿಟಿಯಿಂದ ಚಿತ್ರಮಂದಿರಗಳಿಗೆ ಯಾವುದೇ ಅಪಾಯವಿಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ.
ಮುಂದಿನ ವಾರ ಬಿಡುಗಡೆಯಾಗಲಿರುವ ಚಿತ್ರಗಳನ್ನೂ ಸೇರಿಸಿದರೆ, ಈ ವರ್ಷ ಬಿಡುಗಡೆಯಾದ ಒಟ್ಟು ಚಿತ್ರಗಳ ಸಂಖ್ಯೆ 215 ಮೀರುತ್ತದೆ. ಈ ಪೈಕಿ, ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಎಷ್ಟು ಎಂದು ಹುಡುಗಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ, ಒಟ್ಟಾರೆ ಬಿಡುಗಡೆಯಾದ ಚಿತ್ರಗಳ ಪೈಕಿ ಶೇ.10ರಷ್ಟೂ ಇಲ್ಲ. ಈ ವರ್ಷ ಓಟಿಟಿಯಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಸಂಖ್ಯೆ ಕೇವಲ ನಾಲ್ಕು ಎಂದರೆ ಆಶ್ಚರ್ಯವಾಗುತ್ತದೆ.
ಹೌದು, ಈ ವರ್ಷ ಚಿತ್ರಂದಿರಗಳನ್ನು ಬಿಟ್ಟು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳೆಂದರೆ ಅದು 'ಮ್ಯಾನ್ ಆಫ್ ದಿ ಮ್ಯಾಚ್', 'ಒನ್ ಕಟ್ ಟೂ ಕಟ್', 'ಫ್ಯಾಮಿಲಿ ಪ್ಯಾಕ್' ಮತ್ತು 'ಡಿಯರ್ ವಿಕ್ರಮ್' ಚಿತ್ರಗಳು. ಈ ಪೈಕಿ ಮೊದಲ ಮೂರು ಚಿತ್ರಗಳು ಓಟಿಟಿಗೆಂದೇ ನಿರ್ಮಾಣವಾದಂತವು. 'ಡಿಯರ್ ವಿಕ್ರಮ್' ಚಿತ್ರವು ಚಿತ್ರಮಂದಿರಕ್ಕೆಂದು ತಯಾರಾಗಿದ್ದರೂ, ಕೊನೆಯ ಕ್ಷಣದಲ್ಲಿ ಚಿತ್ರಮಂದಿರಗಳನ್ನು ಬಿಟ್ಟು ನೇರವಾಗಿ ವೂಟ್ನಲ್ಲಿ ಬಿಡುಗಡೆ ಮಾಡಲಾಯಿತು.
ಈ ನಾಲ್ಕು ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಹಲವು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಂತರ ಓಟಿಟಿಗೆ ಬಂದಿವೆ. 'ಜೇಮ್ಸ', 'ಕೆಜಿಎಫ್ 2', 'ಅವತಾರ ಪುರುಷ', 'ಸಕುಟುಂಬ ಸಮೇತ', '21 ಹವರ್ಸ್', '777 ಚಾರ್ಲಿ', 'ಶುಗರ್ಲೆಸ್', 'ವಿಕ್ರಾಂತ್ ರೋಣ', 'ಪೆಟ್ರೋಮ್ಯಾಕ್ಸ್', 'ನೋಡಿ ಸ್ವಾಮಿ ವನು ಇರೋದೇ ಹೀಗೆ', 'ಲವ್ 360', 'ಗುರು ಶಿಷ್ಯರು', 'ಕಾಂತಾರ' ಮುಂತಾದ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಓಟಿಟಿಗೆ ಬಂದಿವೆ. ಚಿತ್ರಮಂದಿರಗಳಲ್ಲಿ ನಿರ್ಮಾಪಕರಿಗೆ ದೊಡ್ಡ ದುಡ್ಡು ಬರದಿದ್ದರೂ ಓಟಿಟಿಯ ಮೂಲಕ ಬಿಡುಗಡೆಯಾಗಿ ಒಳ್ಳೆಯ ಹಣ ಸಂಪಾದಿಸಿದೆ.
ಓಟಿಟಿಯಿಂದ ಚಿತ್ರಮಂದಿರಗಳಿಗೆ ಯಾವುದೇ ಸಮಸ್ಯೆ ಇರದಿದ್ದರೂ, ಈ ವರ್ಷ ಚಿತ್ರಮಂದಿರಗಳಿಗೂ ಜನ ಬಂದಿದ್ದು ಕಡಿಮೆಯೇ. ಕೆಲವು ಚಿತ್ರಗಳನ್ನು ಹೊರತುಪಡಿಸಿದರೆ, ಈ ವರ್ಷ, ಹಲವು ಚಿತ್ರಗಳನ್ನು ನೋಡಲು ಜನ ಚಿತ್ರಮಂದಿರಗಳತ್ತ ಬರಲೇ ಇಲ್ಲ.