ಬೆಂಗಳೂರು: ಈಗ ತೆಲುಗಿನಲ್ಲಿ ಬೇಡಿಕೆಯ ನಟಿ ಆಗಿರುವ ಕನ್ನಡದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ, ತಾವೀಗ ಬಾಡಿಗಾರ್ಡ್ ಆಗುವುದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ ಅದಕ್ಕಾಗಿ ಕಷ್ಟಪಡುತ್ತಿರುವುದಾಗಿಯೂ ಹೇಳಿದ್ದಾರೆ.
ಅಷ್ಟಕ್ಕೂ ಅವರು ಬಾಡಿಗಾರ್ಡ್ ಆಗಲು ಹೊರಟಿದ್ದು ಯಾರಿಗೆ ಗೊತ್ತಾ? ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ. ಹೌದು.. ರಶ್ಮಿಕಾ ಮಂದಣ್ಣ ತಮ್ಮ ಕಸರತ್ತಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಬಳಿಕ ಅದಕ್ಕೆ ಬಂದ ಮೆಚ್ಚುಗೆಗೆ ಪ್ರತಿಕ್ರಿಯಿಸುತ್ತ ಬಾಡಿಗಾರ್ಡ್ ಆಗುವ ಮಾತನ್ನು ಹೇಳಿದ್ದಾರೆ.
ಹೀಗೆ ರಶ್ಮಿಕಾ ಅವರಿಂದ ಬಾಡಿಗಾರ್ಡ್ ಆಗುವ ಮಾತು ಹೊರಬರಲು ಕಾರಣ, 'ವೈಲ್ಡ್ ಡಾಗ್'. ಅರ್ಥಾತ್ ನಾಗಾರ್ಜುನ ಅವರ ಹೊಸ ಸಿನಿಮಾ 'ವೈಲ್ಡ್ ಡಾಗ್'. ಏಪ್ರಿಲ್ 2ರಂದು ಬಿಡುಗಡೆ ಆಗಲಿರುವ 'ವೈಲ್ಡ್ ಡಾಗ್' ಸಿನಿಮಾದ ಪ್ರಚಾರಾರ್ಥ ಚಿತ್ರತಂಡ ಸಿನಿಪ್ರಿಯರಿಗೆ ಒಂದು ಚಾಲೆಂಜ್ ಒಡ್ಡಿದೆ. #WildDogPushUpChallenge ಎಂಬ ಹ್ಯಾಷ್ಟ್ಯಾಗ್ನಲ್ಲಿ ಈ ಚಾಲೆಂಜ್ ಹಾಕಲಾಗಿದ್ದು, ಅದನ್ನು ಹಲವರು ಸ್ವೀಕರಿಸಿ ನಿಧಾನಗತಿಯ ಪುಷ್ಅಪ್ ಮಾಡಿ ವಿಡಿಯೋ ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ, ರಶ್ಮಿಕಾ ಕೂಡ ಆ ಚಾಲೆಂಜ್ ಸ್ವೀಕರಿಸಿ, ಪುಷ್ಅಪ್ ಮಾಡಿದ್ದು, ಅದು ವೈಲ್ಡ್ ಡಾಗ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಮ್ಯಾಟಿನಿ ಎಂಟರ್ಟೇನ್ಮೆಂಟ್ ಕಂಪನಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಆಗಿದೆ.
ಅದನ್ನು ಕೋಟ್ ಮಾಡಿಕೊಂಡಿರುವ ನಾಗಾರ್ಜುನ, ವಾವ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ನಾಗಾರ್ಜುನ ಅವರು ವ್ಯಕ್ತಪಡಿಸಿರುವ ಮೆಚ್ಚುಗೆಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, ಸರ್.. ನೋಡಿ ಇನ್ನೂ ಎಷ್ಟು ಕಷ್ಟಪಡುತ್ತಿದ್ದೇನೆ.. ಒಂದು ದಿನ ನಾನು ನಿಮ್ಮ ಬಾಡಿಗಾರ್ಡ್ ಆಗಿ ನೇಮಕವಾಗುತ್ತೇನೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. 'ವೈಲ್ಡ್ ಡಾಗ್' ಸಿನಿಮಾದಲ್ಲಿ ನಾಗಾರ್ಜುನ, ದಿಯಾ ಮಿರ್ಜಾ, ಸೈಯಾಮಿ ಖೇರ್ ಅಭಿನಯಿಸಿದ್ದಾರೆ. ಅಹಿಶೋರ್ ಸೊಲೊಮನ್ ನಿರ್ದೇಶನ ಮಾಡಿದ್ದಾರೆ.