ಸಿನಿವಾಣಿ

ಜೈಲರ್ ಚಿತ್ರಕ್ಕಾಗಿ ವಿನಾಯಕನ್​ಗೆ ಸಿಕ್ಕ ಸಂಭಾವನೆ ಎಷ್ಟು? ಇಷ್ಟು ಕಡಿಮೆ ಹಣ ಪಡೆದ್ರಾ ವರ್ಮನ್​?

ಬೆಂಗಳೂರು: ಸೂಪರ್​ಸ್ಟಾರ್​ ರಜಿನಿಕಾಂತ್ ಅಭಿನಯದ ಜೈಲರ್​ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಬ್ಲಾಕ್​ಬಸ್ಟರ್​ ಆಯಿತು. ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಅದರಲ್ಲೂ ಖಳನಾಯಕ ವಿನಾಯಕನ್​ ವಿಭಿನ್ನ ಮ್ಯಾನರಿಸಂ ಮೂಲಕ ಅಬ್ಬರಿಸಿ ಬೊಬ್ಬಿರಿದ್ದಾರೆ. ವಿನಾಯಕನ್​ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.

ಜೈಲರ್​ ಸಿನಿಮಾಗಾಗಿ ವಿನಾಯಕನ್​ ಅವರಿಗೆ 35 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರ ಅಭಿನಯಕ್ಕೆ ಈ ಹಣ ತುಂಬಾ ಕಡಿಮೆಯಾಗಿದೆ. ಸಾಕಷ್ಟು ವರದಿಗಳು ವೈರಲ್​ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಿನಾಯಕನ್​, ವರದಿಗಳನ್ನು ಅಲ್ಲಗೆಳೆದಿದ್ದಾರೆ. 35 ಲಕ್ಷ ರೂ. ಪಡೆದಿದ್ದೇನೆ ಎಂಬ ವದಂತಿ ತಪ್ಪು. ಅದಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ಮೂವತ್ತೈದು ಲಕ್ಷ ಕೊಟ್ಟಿದ್ದನ್ನು ನಿರ್ಮಾಪಕರ ಬಳಿ ಕೇಳಬಾರದು. ನನಗೆ ಮೂರು ಪಟ್ಟು ಹೆಚ್ಚು ಸಂಬಳ ನೀಡಲಾಗಿದೆ. ನಾನು ಕೇಳಿದ್ದಷ್ಟು ಹಣವನ್ನು ನಿರ್ಮಾಪಕರು ನಿಖರವಾಗಿ ಕೊಟ್ಟರು. ಸೆಟ್‌ಗಳಲ್ಲಿ ಸಿಬ್ಬಂದಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಅವರು ಬಹಿರಂಗಪಡಿಸಿದರು.

ವಿನಾಯಕನ್​ ಅವರು ವರ್ಮನ್ ಪಾತ್ರಕ್ಕಾಗಿ ಒಂದು ವರ್ಷ ಮೀಸಲಿಟ್ಟಿದ್ದೆ ಎಂದು ತಿಳಿಸಿದ್ದಾರೆ. ನಾನೀಗ ಜೈಲರ್ ನಂತಹ ಬ್ಲಾಕ್​ಬಸ್ಟರ್​ ಸಿನಿಮಾ ಮಾಡಿದ್ದೇನೆ. ಹೀಗಾಗಿ ಮುಂದಿನ ಸಿನಿಮಾ ಆಯ್ಕೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಅಂದಹಾಗೆ ವಿನಾಯಕನ್​ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟ. ತಿಮಿರು ಮತ್ತು ಮಾರಿಯನ್​ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಿತರಾದರು. ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. (ಏಜೆನ್ಸೀಸ್​)