ಹೈದರಾಬಾದ್: ಸಿನಿಮಾಗಳಲ್ಲಿ ನಾಯಕ ಮತ್ತು ನಾಯಕಿಯರ ನಡುವಿನ ಸಂಭಾವನೆಯಲ್ಲಿ ( Actress Remuneration ) ಸಾಕಷ್ಟು ತಾರತಮ್ಯ ಇರುತ್ತದೆ. ನಟರಿಗೆ ಕೊಡುವಷ್ಟು ಸಂಭಾವನೆಯನ್ನು ನಟಿಯರಿಗೆ ಕೊಡುವುದಿಲ್ಲ. ಇಂದು 50 ಕೋಟಿ ರೂ. ಸಂಭಾವನೆ ಪಡೆಯುವ ನಟರೂ ಸಹ ಇದ್ದಾರೆ. ಆದರೆ, ನಟಿಯರ ವಿಚಾರಕ್ಕೆ ಬಂದರೆ ಕೋಟಿ ರೂ. ಸಂಭಾವನೆ ಪಡೆಯುವ ನಟಿಯರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಬಹಳ ವರ್ಷಗಳ ಹಿಂದೆ ನಟಿಯರಿಗೆ ಲಕ್ಷಕ್ಕಿಂತಲೂ ಕಡಿಮೆ ಸಂಭಾವನೆ ನೀಡಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಟರಿಗಿಂತ ನಾವೇನು ಕಮ್ಮಿ ಇಲ್ಲ ಎನ್ನವಂತೆ ನಟಿಯರು ಕೂಡ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ತೆಲುಗು ಸಿನಿಮಾ ಇಂಡಸ್ಟ್ರಿ ಕೂಡ ಪ್ರಮುಖವಾದದ್ದು. ದೊಡ್ಡ ಬಜೆಟಿನ ಚಿತ್ರಗಳನ್ನು ತೆಗೆಯುವುದರಲ್ಲಿ ಇವರು ಸದಾ ಮುಂದು. ಹೀಗಾಗಿ ಸಂಭಾವನೆ ವಿಚಾರದಲ್ಲೂ ಟಾಲಿವುಡ್ ಸಖತ್ ಸೌಂಡ್ ಮಾಡುತ್ತದೆ. ನಾಯಕ ನಟರು 20, 30, 40 ಹೀಗೆ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ. ಹಾಗಾದರೆ, ನಟಿಯರು ಪಡೆಯುವ ಸಂಭಾವನೆ ಎಷ್ಟು? ಹೆಚ್ಚು ಹಣ ಪಡೆಯುವ ನಾಯಕಿ ಯಾರು ಎಂಬುದನ್ನು ನಾವೀಗ ತಿಳಿಯೋಣ.
ಸಿನಿಮೂಲಗಳ ಪ್ರಕಾರ ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಲೇಡಿ ಸೂಪರ್ಸ್ಟಾರ್ ನಯನತಾರಾ ಮೊದಲ ಸ್ಥಾನದಲ್ಲಿದ್ದಾರೆ. ನಯನತಾರಾ 13 ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅನುಷ್ಕಾ ಶೆಟ್ಟಿ ಎರಡನೇ ಸ್ಥಾನದಲ್ಲಿದ್ದಾರೆ. ಅನುಷ್ಕಾ ಅವರು 4 ರಿಂದ 7 ಕೋಟಿ ರೂ. ತೆಗೆದುಕೊಳ್ಳುತ್ತಾರೆ. ಮೂರನೇ ಸ್ಥಾನದಲ್ಲಿರುವ ಪೂಜಾ ಹೆಗ್ಡೆ 5 ಕೋಟಿ ರೂ. ಪಡೆಯುತ್ತಾರೆ.
ತ್ರಿಶಾ ನಾಲ್ಕನೇ ಸ್ಥಾನದಲ್ಲಿದ್ದು, ರಶ್ಮಿಕಾ ಮಂದನಾ ಐದನೇ ಸ್ಥಾನದಲ್ಲಿದ್ದಾರೆ. ರಶ್ಮಿಕಾ 3 ರಿಂದ 4 ಕೋಟಿ ಪಡೆದರೆ, ತ್ರಿಷಾ 4 ರಿಂದ 6 ಕೋಟಿ ಪಡೆಯುತ್ತಾರೆ. ಆರನೇ ಸ್ಥಾನದಲ್ಲಿರುವ ಸಮಂತಾ 3 ರಿಂದ 5 ಕೋಟಿ ರೂ., 7ನೇ ಸ್ಥಾನದಲ್ಲಿರುವ ಕಾಜಲ್ ಅಗರ್ವಾಲ್ 2 ಕೋಟಿ ರೂ. ಪಡೆಯುತ್ತಾರೆ.
ಅಂದಹಾಗೆ 2006ರಲ್ಲಿ ನಯನತಾರಾ ಅವರು ಸೂಪರ್ಸ್ಟಾರ್ ವೆಂಕಟೇಶ್ ನಟನೆಯ ಲಕ್ಷ್ಮಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅವರು ಜೈ ಸಿಂಹ, ನರಸಿಂಹ ರೆಡ್ಡಿ, ಶ್ರೀ ರಾಮರಾಜ್ಯಂ, ಗಾಡ್ ಫಾದರ್ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲೂ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಮೊದಲಿದ್ದಾರೆ. ಈ ಮೂಲಕ ಲೇಡಿ ಸೂಪರ್ಸ್ಟಾರ್ ಎಂಬುದನ್ನು ಸಾಬೀತು ಮಾಡಿದ್ದಾರೆ. (ಏಜೆನ್ಸೀಸ್)