ಬೆಂಗಳೂರು: ಇದುವರೆಗೂ ಹಲವು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್ವುಡ್ ನಟಿ ನಿಮಿಕಾ ರತ್ನಾಕರ್, ಇದೇ ಮೊದಲ ಬಾರಿಗೆ 'ನಾಗಲೋಕ ನಾಗಕನ್ನಿಕೆ ಶ್ರೀವಾಸವಿ' ಎಂಬ ಪೌರಾಣಿಕ ಕಿರುಚಿತ್ರದಲ್ಲಿ ವಾಸವಿ ದೇವಿಯಾಗಿ ಕಾಣಿಸಿಕೊಂಡಿದ್ದಾರೆ.
ಭಾರತದಾದ್ಯಂತ ಅನೇಕ ವಾಸವಿದೇವಿಯ ದೇವಸ್ಥಾನಗಳಿದೆ ಆದರೆ ವಾಸವಿ ದೇವಿಗೆ ಬ್ರಹ್ಮ ರಥೋತ್ಸವ ನಡೆಯುವುದು ಮಲ್ಲೇಶ್ವರಂ ವಾಸವಿ ದೇವಸ್ಥಾನದಲ್ಲಿ ಮಾತ್ರ. ಕಳೆದ 20 ವರ್ಷಗಳಿಂದ ಇಲ್ಲಿ ಅದ್ದೂರಿಯಾಗಿ ಬ್ರಹ್ಮ ರಥೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ವಿಶೇಷವೆಂದರೆ, ಕಲಾ ನಿರ್ದೇಶಕ ವಸಂತ ಎಂ ಕುಲಕರ್ಣಿ ಅವರ ಸಾರಥ್ಯದಲ್ಲಿ 'ನಾಗಕನ್ಯೆ ಶ್ರೀವಾಸವಿ' ಎಂಬ ಭವ್ಯ ನಾಗಲೋಕದ ಸೃಷ್ಟಿ ಮತ್ತು 'ನಾಗಲೋಕ ನಾಗಕನ್ನಿಕೆ ಶ್ರೀವಾಸವಿ' ಎಂಬ ಐದು ನಿಮಿಷಗಳ ಕಿರು ಚಲನಚಿತ್ರ ನಿರ್ಮಾಣ.
'ನಾಗಲೋಕ ನಾಗಕನ್ನಿಕೆ ಶ್ರೀವಾಸವಿ' ಕಿರುಚಿತ್ರವನ್ನು ಲಕ್ಕಿ ಶಂಕರ್ ನಿರ್ದೇಶನ ಮಾಡಿದರೆ, ಜೈಆನಂದ್ ಛಾಯಾಗ್ರಹಣ ಮಾಡಿದ್ದಾರೆ. ನಿಮಿಕ ರತ್ನಾಕರ್. ವಾಸವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಲಿಂಗು ಶ್ರೀಧರ್, ಪ್ರಸನ್ನ ಗೌಡ ಮುಂತಾದವರು ಅಭಿನಯಿಸಿದ್ದಾರೆ. ಜೇಮ್ಸ್ ಅವರ ಸಂಗೀತ ನಿರ್ದೇಶನ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ. ಶಶಾಂಕ್ ಶೇಷಗಿರಿ ಹಾಡೊಂದನ್ನು ಹಾಡಿದ್ದಾರೆ. ಡಿಸೆಂಬರ್ 16 ರಿಂದ ಜನವರಿ 3ರ ತನಕ ಬ್ರಹ್ಮರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರೊಜೆಕ್ಟರ್ ಮೂಲಕ ಈ ಕಿರುಚಿತ್ರ ಪ್ರಸಾರವಾಗುತ್ತಲೇ ಇರುತ್ತದೆ.
ಇದನ್ನೂ ಓದಿ: ಶಾರದೆ, ದುರ್ಗೆಯಾದಾಗ … ಬೃಂದಾ ಈಗ ‘ಜ್ಯೂಲಿಯಟ್’
ವಾಸವಿ ಮಾತೆಯ ಪಾತ್ರದಲ್ಲಿ ಅಭಿನಯಿಸಿರುವುದು ತಮ್ಮ ಬಹುಜನ್ಮಗಳ ಪುಣ್ಯ ಎನ್ನುವ ನಿಮಿಕಾ, 'ಈ ಕಿರುಚಿತ್ರ ನೋಡಿದ ಪ್ರತಿಯೊಬ್ಬರೂ ನನ್ನನ್ನು ಗುರುತಿಸುತ್ತಿರುವುದು ಖುಷಿಯಾಗಿದೆ' ಎನ್ನುತ್ತಾರೆ.