ಬೆಂಗಳೂರು: ನಟ ನಿಖಿಲ್ ಕುಮಾರಸ್ವಾಮಿ ಒಪ್ಪಿಕೊಂಡ ಎರಡ್ಮೂರು ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ನಿಂದ ಕೊಂಚ ಬಿಡುವು ಪಡೆದಿದ್ದ ಅವರು, ಇದೀಗ ಮತ್ತೆ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಈ ನಡುವೆ ಸಾಕಷ್ಟು ಕಥೆಗಳನ್ನೂ ಕೇಳಿದ್ದು, ಆ ಪೈಕಿ ಗುರುವಾರ ಹೊಸ ಚಿತ್ರದ ಘೋಷಣೆ ಆಗಿದೆ. ಕೆವಿಎನ್ ಬ್ಯಾನರ್ನಲ್ಲಿ ಕಮರ್ಷಿಯಲ್ ಕಥಾಹಂದರದ ಸಿನಿಮಾ ಸೆಟ್ಟೇರಲಿದೆ.
ಲಾಕ್ಡೌನ್ ಅವಧಿಯಲ್ಲಿ ಕಥೆ ಕೇಳುವಲ್ಲಿ ನಿರತರಾಗಿದ್ದ ನಿಖಿಲ್, ಆ ಪೈಕಿ ಒಂದು ಕಥೆಯನ್ನು ಅಂತಿಮಮಾಡಿದ್ದು ಅದಕ್ಕೆ ಮಂಜು ಅಥರ್ವ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಕನ್ನಡದ ‘ಮಾಸ್ಟರ್ ಪೀಸ್’, ‘ಮಫ್ತಿ’ ಸೇರಿ ಹಲವು ಸಿನಿಮಾಗಳಿಗೆ ಕೆಲಸ ಮಾಡದ ಅನುಭವ ಇರುವ ಮಂಜು, ಮೊದಲ ಬಾರಿ ಸ್ವತಂತ್ರ ನಿರ್ದೇಶಕರಾಗಿ ಈ ಚಿತ್ರದ ಮೂಲಕ ಬಡ್ತಿ ಪಡೆದಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಸುಪ್ರಿತ್ ಬಂಡವಾಳ ಹೂಡುತ್ತಿದ್ದು, ನಿಶಾ ವೆಂಕಟ್ ಕೊನಂಕಿ ಸಹ ಕೈ ಜೋಡಿಸಿದ್ದಾರೆ.
ಈಗಾಗಲೇ ಸಖತ್, ಬೈಟು ಲವ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ಪ್ರೊಡಕ್ಷನ್ಸ್ ಇದೀಗ ಮೂರನೇ ಸಿನಿಮಾ ಕೈಗೆತ್ತಿಕೊಂಡಿದ್ದು, ಸದ್ಯದ ಪ್ರಕಾರ ಸ್ಕ್ರಿಪ್ಟಿಂಗ್ ಕೆಲಸ ಬಹುತೇಕ ಮುಗಿದಿದ್ದು, ಪಾತ್ರ ವರ್ಗದ ಆಯ್ಕೆ ಬಗ್ಗೆ ಇನ್ನಷ್ಟೆ ಕೆಲಸ ಆರಂಭಿಸಬೇಕಿದೆ. ಇತ್ತ ತಾಂತ್ರಿಕ ಬಳಗದ ಆಯ್ಕೆ ಮುಗಿದಿದೆ. ಅಜನೀಶ್ ಲೋಕನಾಥ್ ಸಂಗೀತ, ಮಫ್ತಿ ಸಿನಿಮಾ ಖ್ಯಾತಿಯ ಛಾಯಾಗ್ರಾಹಕ ನವೀನ್ ಇಲ್ಲಿಯೂ ಮುಂದುವರಿಯಲಿದ್ದಾರೆ. ಆಗಸ್ಟ್ ಅಥವಾ ಸೆಪ್ಟಂಬರ್ನಲ್ಲಿ ಸಿನಿಮಾ ಸೆಟ್ಟೇರಲಿದೆ.