ಸಿನಿವಾಣಿ

ನಾಳೆ ನಿಖಿಲ್​ ಹೊಸ ಚಿತ್ರ ಘೋಷಣೆ ; ಲೈಕಾ ಪ್ರೊಡಕ್ಷನ್ಸ್​ನಲ್ಲಿ ಮೂಡಿಬರಲಿರುವ ಸಿನಿಮಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಿಖಿಲ್​ ಕುಮಾರಸ್ವಾಮಿ ಹೊಸ ಸಿನಿಮಾ ನಾಳೆ ಘೋಷಣೆಯಾಗಲಿದೆ. 2021ರಲ್ಲಿ ಬಿಡುಗಡೆಯಾದ "ರೈಡರ್​' ಬಳಿಕ ನಿಖಿಲ್​ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಕೆವಿಎನ್​ ಪ್ರೊಡಕ್ಷನ್ಸ್​ನಲ್ಲಿ, ಮಂಜು ಅಥರ್ವ ನಿರ್ದೇಶನದಲ್ಲಿ "ಯದುವೀರ' ಸಿನಿಮಾ ಪ್ರಾರಂಭವಾಯಿತಾದರೂ, ಅದನ್ನು ಸದ್ಯಕ್ಕೆ ಮುಂದೂಡಲಾಗಿದೆ. ಜತೆಗೆ ಕಳೆದ ಒಂದು ವರ್ಷದಿಂದ ನಿಖಿಲ್​ ವಿಧಾನಸಭಾ ಚುನಾವಣೆಯಲ್ಲಿ ಬಿಜಿಯಿದ್ದ ಕಾರಣ ಸಿನಿಮಾಗಳಿಂದ ದೂರ ಉಳಿದಿದ್ದರು.

ಚುನಾವಣೆ ಮುಗಿದ ಬಳಿಕ ಬ್ರೇಕ್​ ಪಡೆದು ಕುಟುಂಬ ಸಮೇತ ಐಸ್​ಲ್ಯಾಂಡ್​, ಫಿನ್​ಲ್ಯಾಂಡ್​ ಸೇರಿ ಯೂರೋಪ್​ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ಸಾದ ಬಳಿಕ ನಿಖಿಲ್​ ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಈ ವರ್ಷದಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳಿಸಿ, ಮುಂದಿನ ವರ್ಷ ಮತ್ತೆ ಲೋಕಸಭಾ ಚುನಾವಣೆಯತ್ತ ಗಮನ ಹರಿಸುವ ಆಲೋಚನೆ ನಿಖಿಲ್​ ಕುಮಾರಸ್ವಾಮಿ ಅವರದು ಎನ್ನಲಾಗಿದೆ.

ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಈ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಕಾಲಿವುಡ್​ ಮೂಲದ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ಸಿನಿಮಾ ನಿರ್ಮಿಸಲಿದ್ದು, ನಿಖಿಲ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಲಿದೆ. ತಮಿಳಿನ "ಕತ್ತಿ', "2.0', "ಕಾಪ್ಪನ್​', "ವಡಾ ಚೆನ್ನೈ', "ದರ್ಬಾರ್​', "ಪೊನ್ನಿಯಿನ್​ ಸೆಲ್ವನ್​' ಸರಣಿ ಹಾಗೂ ತೆಲುಗಿನಲ್ಲಿ "ಕೈದಿ ನಂ. 150', ಹಿಂದಿಯಲ್ಲಿ "ರಾಮ್​ಸೇತು', "ಗುಡ್​ ಲಕ್​ ಜೆರ್ರಿ' ಸೇರಿ ಕಳೆದ 10 ವರ್ಷಗಳಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ಲೈಕಾ ಪ್ರೊಡಕ್ಷನ್ಸ್​ಗೆ ಸಲ್ಲುತ್ತದೆ.

ಜತೆಗೆ "ಚಂದ್ರಮುಖಿ 2', "ಇಂಡಿಯನ್​ 2', "ಲಾಲ್​ ಸಲಾಮ್​' ಸೇರಿ ಐದು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಅವುಗಳ ಜತೆಗೆ ಇದೀಗ ಲೈಕಾ ನಿಖಿಲ್​ ಐದನೇ ಸಿನಿಮಾ ನಿರ್ಮಿಸಲು ಮುಂದಾಗಿದೆ. ಬಹುಭಾಷೆಗಳಲ್ಲಿ, ದೊಡ್ಡ ಬಜೆಟ್​ನಲ್ಲಿ, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಮೂಡಿಬರಲಿದೆ ಎನ್ನಲಾಗಿದೆ.