ಬೆಂಗಳೂರು: ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಮತ್ತೆ ಲಾಕ್ಡೌನ್ ಘೋಷಣೆ ಆಗಿದೆ. ಕಿರುತೆರೆ-ಹಿರಿತೆರೆ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಚಿತ್ರೀಕರಣ ಬಂದ್ ಆಗಿರುವುದರಿಂದ ಕೆಲವರು ಮನೆಯಲ್ಲಿದ್ದರೆ, ನಟಿ ರಂಜನಿ ರಾಘವನ್ ಮಾತ್ರ ಕರೊನಾ ಹಾವಳಿಯ ನಡುವೆಯೇ ಫೀಲ್ಡಿಗಿಳಿದಿದ್ದಾರೆ.
ಹೌದು, ಕರೊನಾ ಕುರಿತ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಪೊಲೀಸ್ ಇಲಾಖೆ ಜತೆ ರಂಜನಿ ಕೈ ಜೋಡಿಸಿದ್ದಾರೆ. ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕೆಲಸ ಮಾಡಲು ಮುಂದಾಗಿದ್ದಾರೆ. ತಾವಿರುವ ವಿದ್ಯಾರಣ್ಯಪುರದಲ್ಲಿನ ಕರೊನಾ ಬಗೆಗಿನ ಅಪ್ಡೇಟ್ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡುತ್ತಿದ್ದಾರೆ. ಈ ಬಗ್ಗೆ ಸ್ವತಃ ರಂಜನಿ ‘ವಿಜಯವಾಣಿ’ ಜತೆ ಮಾತನಾಡಿದ್ದು, ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
‘ನನಗೆ ಕಾಲೇಜು ದಿನಗಳಿಂದಲೂ ಎನ್ಸಿಸಿ, ಎನ್ಎಸ್ಎಸ್ ನಲ್ಲಿ ಆಸಕ್ತಿ. ಇಂಥ ಹೊತ್ತಲ್ಲಿ ಏನಾದರೂ ಮಾಡಬೇಕು ಎಂದು ಅನಿಸಿತ್ತು. ಆಗ ಸಿವಿಲ್ ಪೊಲೀಸ್ ವಾರ್ಡನ್ ಆಯ್ಕೆ ಬಗ್ಗೆ ಗೊತ್ತಾಯ್ತು. ಆಯ್ಕೆಯೂ ಆದೆ. ಇದೀಗ ವಿದ್ಯಾರಣ್ಯಪುರದಲ್ಲಿ ಏನೆಲ್ಲ ಆಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ. ಏರಿಯಾ ತುಂಬೆಲ್ಲ ರ‍್ಯಾಲಿ ಮಾಡಿ, ಬೇಕಾಬಿಟ್ಟಿ ಓಡಾಡುವವರನ್ನು, ಗುಂಪುಗೂಡಿ ನಿಲ್ಲುವವರನ್ನು ಚದುರಿಸುವ ಕೆಲಸ ಮಾಡುತ್ತಿದ್ದೇವೆ. ಸದ್ಯ ಲಾಕ್ಡೌನ್ ಮುಗಿಯುವವರೆಗೂ ಈ ಪ್ರಕ್ರಿಯೆ ನಡೆಯಲಿದೆ’ ಎನ್ನುವ ರಂಜನಿ, ಈ ಕೆಲಸ ಆಯ್ದುಕೊಂಡಿದ್ದಕ್ಕೆ ಮನೆಯಲ್ಲಿ ಬೈಯಿಸಿಕೊಂಡಿದ್ದೂ ಉಂಟಂತೆ. ‘ಬೆಂಗಳೂರಿನಲ್ಲಿ ಕರೊನಾ ಹಾವಳಿ ಹೆಚ್ಚಾಗುತ್ತಿರುವುದರಿಂದ ಹೊರಗಡೆ ಕಾಲಿಡಬೇಡ ಎಂದು ಅಪ್ಪ-ಅಮ್ಮ ಆಜ್ಞೆ ಮಾಡಿದ್ದರು. ಅದರ ನಡುವೆಯೇ ನಾನು ಇದೀಗ ಹೊರ ಬಂದಿದ್ದೇನೆ. ಮನೆಯವರ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲೂ ಡಿಸ್ಟನ್ಸ್ ಕಾಯ್ದುಕೊಳ್ಳುತ್ತಿದ್ದೇನೆ. ಪ್ಯತ್ಯೇಕವಾಗಿ ಮಲಗುವುದರ ಜತೆಗೆ ಪ್ರತ್ಯೇಕ ಊಟದ ತಟ್ಟೆ ಬಳಸುತ್ತಿದ್ದೇನೆ’ ಎನ್ನುತ್ತಾರೆ ರಂಜನಿ.