ಸಿನಿವಾಣಿ

ನಗುವಿನ ಹೊಸ ಅಡ್ಡ, ಕಾಮಿಡಿ ಗ್ಯಾಂಗ್ಸ್

Webdesk - Ravikanth

ಬೆಂಗಳೂರು: ಇಷ್ಟು ದಿನ ಮಾಸ್ಕ್ ಹಿಂದೆ ಅಡಗಿದ್ದ ನಗು ಇನ್ನುಮುಂದೆ ಅನಿಯಮಿತವಾಗಿ ಹೊರಬರಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಕಾಮಿಡಿ ಗ್ಯಾಂಗ್ಸ್’ ಎಂಬ ಹೊಸ ರಿಯಾಲಿಟಿ ಶೋ ಶನಿವಾರ (ಏಪ್ರಿಲ್ 16) ಪ್ರಾರಂಭವಾಗಿದ್ದು, ಇನ್ನು ಮುಂದೆ ಪ್ರತಿ ಶನಿವಾರ ಮತ್ತು ಭಾನವಾರ ರಾತ್ರಿ 9ಕ್ಕೆ ನಗುವಿನ ಹೊಳೆಯೇ ಹರಿಯಲಿದೆ. ‘ಕಾಮಿಡಿ ಗ್ಯಾಂಗ್ಸ್’ನ ವಿಶೇಷತೆಯೆಂದರೆ, ಪ್ರತಿ ವಾರಾಂತ್ಯ ಆರು ತಂಡಗಳು ಒಂದಕ್ಕಿಂತ ಒಂದು ವಿಭಿನ್ನ ಮತ್ತು ವಿಶೇಷವಾದ ಸ್ಕಿಟ್​ಗಳ ಮೂಲಕ ನಗು ಹಂಚಲಿದ್ದಾರೆ. ಇಲ್ಲಿ ಯಾವುದೇ ಎಲಿಮಿನೇಷನ್ ಇರುವುದಿಲ್ಲ. ಸ್ಕಿಟ್​ಗಳಿಗೆ ಅಂಕ ನೀಡಲಾಗುವುದು ಅಷ್ಟೇ. ಅಂತಿಮವಾಗಿ ಯಾವ ತಂಡ ಅತೀ ಹೆಚ್ಚು ಅಂಕಗಳನ್ನು ಪಡೆಯುತ್ತದೋ, ಅದನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಈ ಆರು ತಂಡಗಳಲ್ಲಿ ಐದೈದು ಸ್ಪರ್ಧಿಗಳಿರುತ್ತಾರೆ. ಆರೂ ತಂಡಗಳಿಗೆ ಒಂದೊಂದು ವಿಶಿಷ್ಟ ಹೆಸರನ್ನು ಇಡಲಾಗಿದ್ದು, ಪ್ರತಿಯೊಂದು ತಂಡಕ್ಕೂ ಒಬ್ಬೊಬ್ಬರು ಕ್ಯಾಪ್ಟನ್​ಗಳು ಇರುತ್ತಾರೆ ಮತ್ತು ಅವರು ಆ ತಂಡವನ್ನು ಮುನ್ನಡೆಸುತ್ತಾರೆ. ಮಷ್ಕಿರಿ ಮಹಾರಾಣೀಸ್ ಎಂಬ ತಂಡವನ್ನು ನಯನಾ ಎಚ್. ಉಮುಚಗಿ ಮುನ್ನಡೆಸಿದರೆ, ಕ್ವಾಟ್ಲೆಗಳ ಫ್ಯಾಕ್ಟರಿ , ಓತ್ಲ ತರ್ಲೆ ತಂಡ, ರೆಬೆಲ್ ಕಾಮಿಡಿ ಬಾಯ್್ಸ ಲಾಫ್ ಕೊಡೋ ಬಡ್ಡೆತವು ಮತ್ತು ಪಕ್ಕಾ ಉಡಾಳ್ ಕಾಮಿಡಿಯನ್ಸ್ (ಪಿಯುಸಿ) ಹೆಸರಿನ ತಂಡಗಳ ಜವಾಬ್ದಾರಿಯನ್ನು ಕ್ರಮವಾಗಿ ಹಿತೇಶ್ ಕಾಪಿನಡ್ಕ, ಉದಯ ಅಂಕರವಳ್ಳಿ, ಸೂರ್ಯ ಎಂ, ಮಡೇನೂರು ಮನು ಮತ್ತು ಚಿದಂಬರ ಪೂಜಾರಿ ಹೊತ್ತಿದ್ದಾರೆ. ‘ಕಾಮಿಡಿ ಗ್ಯಾಂಗ್ಸ್’ನ ತೀರ್ಪಗಾರರಾಗಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಶ್ರುತಿ ಹರಿಹರನ್ ಮತ್ತು ಕುರಿ ಪ್ರತಾಪ್ ಇರುತ್ತಾರೆ. ಇನ್ನು, ಈ ಕಾರ್ಯಕ್ರಮದ ಮೂಲಕ ಶಿವರಾಜ್ ಕೆ.ಆರ್. ಪೇಟೆ ನಿರೂಪಕರಾಗಿ ಬಡ್ತಿ ಪಡೆದಿದ್ದಾರೆ.