ಬೆಂಗಳೂರು: ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು, ಶುಕ್ರವಾರ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರವನ್ನು ಘೋಷಿಸಿದ್ದಾರೆ. ಈ ಬಾರಿ ಅವರು, ಮಲಯಾಳಂ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಜತೆಗೆ ಕೈಜೋಡಿಸಿದ್ದು, ‘ಟೈಸನ್’ ಎಂಬ ಚಿತ್ರ ನಿರ್ವಿುಸುವುದಕ್ಕೆ ಮುಂದಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲಿ ಪೃಥ್ವಿರಾಜ್ ಅವರನ್ನು ಹೊಂಬಾಳೆ ತಂಡ ಭೇಟಿ ಮಾಡಿದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿತ್ತು. ಅದಾದ ಕೆಲವೇ ದಿನಗಳಲ್ಲಿ, ‘ಸಲಾರ್’ ಚಿತ್ರದಲ್ಲಿ ಪೃಥ್ವಿರಾಜ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸ್ವತಃ ಪ್ರಭಾಸ್ ಹೇಳಿದ್ದರು. ಹಾಗಾಗಿ, ಪೃಥ್ವಿರಾಜ್ ಅವರನ್ನು ಹೊಂಬಾಳೆ ತಂಡ ಇದೇ ಕಾರಣಕ್ಕೆ ಭೇಟಿಯಾಗಿದೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ, ಇದೀಗ ‘ಸಲಾರ್’ ಅಲ್ಲದೆ, ಪೃಥ್ವಿರಾಜ್ ಅಭಿನಯದಲ್ಲಿ ‘ಟೈಸನ್’ ಘೋಷಿಸಿದ್ದಾರೆ ವಿಜಯ್ ಕುಮಾರ್ ಕಿರಗಂದೂರು. ಹೆಸರು ಕೇಳಿದರೆ ಬಾಕ್ಸಿಂಗ್ ಕುರಿತ ಚಿತ್ರ ಇರಬಹುದು ಎಂದನಿಸಬಹುದು. ಆದರೆ, ಅಸಲಿಗೆ ಚಿತ್ರದಲ್ಲೇನಿದೆ ಎಂದು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ. ಈ ಚಿತ್ರದಲ್ಲಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ ಪೃಥ್ವಿರಾಜ್. ಅಂದಹಾಗೆ, ನಿರ್ದೇಶಕರಾಗಿ ಇದು ಅವರ ನಾಲ್ಕನೇ ಚಿತ್ರ. ಮೋಹನ್ ಲಾಲ್ ಅಭಿನಯದ ‘ಲೂಸಿಫರ್’ ಚಿತ್ರದ ಮೂಲಕ ನಿರ್ದೇಶಕರಾದ ಪೃಥ್ವಿರಾಜ್, ಆ ನಂತರ ‘ಬ್ರೋ ಡ್ಯಾಡಿ’ ಎಂಬ ಚಿತ್ರ ನಿರ್ದೇಶಿಸಿದ್ದರು. ಇತ್ತೀಚೆಗೆ ‘ಲೂಸಿಫರ್’ನ ಮುಂದುವರಿದ ಭಾಗವಾದ ‘ಎಲ್ 2: ಎಂಪುರಾಣ್’ ಎಂಬ ಚಿತ್ರ ಘೋಷಿಸಿದ್ದರು. ಈಗ ‘ಟೈಸನ್’ ಬಗ್ಗೆ ಸುದ್ದಿ ಹೊರಬಿದ್ದಿದೆ. ‘ಎಲ್ 2’ ಮುಗಿದ ನಂತರ ಈ ಚಿತ್ರ ಶುರುವಾಗುವ ನಿರಿಕ್ಷೆ ಇದೆ.
ಅಂದಹಾಗೆ, ‘ಲೂಸಿಫರ್’ ಮತ್ತು ‘ಎಲ್ 2’ಗೆ ಕಥೆ ಬರೆದಿರುವ ಮುರಳಿ ಗೋಪಿ ಈ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಮಿಕ್ಕಂತೆ ಕಲಾವಿದರ ಮತ್ತು ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯುತ್ತಿದೆ. ‘ಟೈಸನ್’ ಮೊದಲು ಮಲಯಾಳಂನಲ್ಲಿ ತಯಾರಾಗಿ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಗೆ ಡಬ್ ಆಗಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.