ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ನಟ ಧನಂಜಯ ಅವರ ಜನ್ಮದಿನ. ಇದೇ ಸಂದರ್ಭದಲ್ಲಿ ಅವರ ಒಡೆತನದ 'ಡಾಲಿ ಪಿಕ್ಚರ್ಸ್' ಎಂಬ ನಿರ್ಮಾಣ ಸಂಸ್ಥೆ ಘೋಷಣೆಯೊಂದನ್ನು ಮಾಡಿದೆ. ಇದು ಚಿತ್ರರಂಗಕ್ಕೆ ಬರುವ ಹೊಸಬರಲ್ಲಿ ಒಂದು ಆಶಾಕಿರಣವನ್ನು ಮೂಡಿಸಿದೆ.
'ಡಾಲಿ ಪಿಕ್ಚರ್ಸ್' ಎಂಬ ಕನಸೊಂದನ್ನು ಹುಟ್ಟುಹಾಕಿದ ಈ ಸಂಸ್ಥೆಯ ನಿರ್ಮಾತೃ ಧನಂಜಯರವರ ಹುಟ್ಟುಹುಬ್ಬದ ಪ್ರಯುಕ್ತ ನಮ್ಮಿಂದ ಹೀಗೊಂದು ಘೋಷಣೆ ಎಂಬುದಾಗಿ ಲಿಖಿತವಾಗಿ ಘೋಷಣೆ ಮಾಡಲಾಗಿದ್ದು, ಅದನ್ನು ನಟ ಧನಂಜಯ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹೊಸಬರ ಆರಂಭದ ಕಲ್ಲುಮುಳ್ಳಿನ ದಾರಿಯನ್ನು ಹೇಗೆ ಸುಲಭವಾಗಿಸಬಹುದೆಂದು ಸ್ವತಃ ಆ ದಾರಿಯಲ್ಲಿ ನಡೆದುಬಂದಿರುವ 'ಡಾಲಿ' ಧನಂಜಯವರ ಆಲೋಚನೆಯೇ ಈ ಘೋಷಣೆಗೆ ಹಿನ್ನೆಲೆ ಎಂಬುದಾಗಿಯೂ ಅದರಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಹಾಗೂ ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾ ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಈ ಮೂಲಕ ಘೋಷಿಸುತ್ತಿದ್ದೇವೆ ಎಂದು ಡಾಲಿ ಪಿಕ್ಚರ್ಸ್ ಹೇಳಿಕೊಂಡಿದೆ. ಇದೊಂದು ಉತ್ತಮ ನಡೆಯಾಗಿದ್ದು, ಸಿನಿಪ್ರಿಯರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.