ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್​ ದೇವರಕೊಂಡ 
ಸಿನಿವಾಣಿ

ಕ್ಯಾಮೆರಾ ಮುಂದೆಯೇ ರಶ್ಮಿಕಾರನ್ನು ಅವಮಾನಿಸಿದ್ರಾ ವಿಜಯ್ ದೇವರಕೊಂಡ? ನೆಟ್ಟಿಗರು ವಾಗ್ದಾಳಿ ನಡೆಸುತ್ತಿರುವುದೇಕೆ? Rashmika Mandanna

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ಕಾರ್ಯಕ್ರಮದ ಪ್ರೋಮೋ ಪ್ರಕಾರ, ರಶ್ಮಿಕಾ ಅವರೇ ತನ್ನ ಹಿಂದೆ ಬಿದ್ದು ಲವ್​ ಪ್ರಪೋಸ್ ಮಾಡಿದ್ದಾಗಿ ಮತ್ತು ಒಪ್ಪಿಗೆ ನೀಡಲು ಬಹುತೇಕ ಬೇಡಿಕೊಳ್ಳುವಂತೆ ಮಾಡಿದ್ದಾಗಿ ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ.

ಹೈದರಾಬಾದ್​: ಸೌತ್​ ಸಿನಿರಂಗದ ಜನಪ್ರಿಯ ತಾರಾದಂಪತಿಯಾದ ವಿಜಯ್ ದೇವರಕೊಂಡ ( Vijay Deverakonda ) ಮತ್ತು ರಶ್ಮಿಕಾ ಮಂದಣ್ಣ ( Rashmika Mandanna ) ಮತ್ತೊಮ್ಮೆ ಚರ್ಚೆಯ ವಿಷಯವಾಗಿದ್ದಾರೆ. ಬಾಲಿವುಡ್​ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಪ್ರಸಿದ್ಧ 'ಕಾಫಿ ವಿತ್ ಕರಣ್' (Koffee with Karan) ಸೆಲೆಬ್ರಿಟಿ ಟಾಕ್ ಶೋನಲ್ಲಿ ಈ ಜೋಡಿ ಭಾಗವಹಿಸಿದ್ದು, ಕಾರ್ಯಕ್ರಮದ ಪ್ರೋಮೋದಲ್ಲಿ ವಿಜಯ್ ಆಡಿರುವ ಕೆಲವು ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ಆಕ್ರೋಶಕ್ಕೆ ಗ್ರಾಸವಾಗಿವೆ. ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವಾಗ ವಿಜಯ್ ಅವರು ರಶ್ಮಿಕಾರನ್ನು ಹೀಯಾಳಿಸುವಂತೆ ವರ್ತಿಸಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಅಷ್ಟಕ್ಕೂ ವಿಜಯ್​ ಹೇಳಿದ್ದೇನು? ಅವರ ಮಾತಿನಲ್ಲಿ ತಪ್ಪಿದೆಯೇ? ನೆಟ್ಟಿಗರ ಟೀಕೆ ಸರಿಯೇ? ಈ ಬಗ್ಗೆ ಇಲ್ಲಿದೆ ಒಂದು ಕಂಪ್ಲೀಟ್​ ವರದಿ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ಕಾರ್ಯಕ್ರಮದ ಪ್ರೋಮೋ ಪ್ರಕಾರ, ರಶ್ಮಿಕಾ ಅವರೇ ತನ್ನ ಹಿಂದೆ ಬಿದ್ದು ಲವ್​ ಪ್ರಪೋಸ್ ಮಾಡಿದ್ದಾಗಿ ಮತ್ತು ಒಪ್ಪಿಗೆ ನೀಡಲು ಬಹುತೇಕ ಬೇಡಿಕೊಳ್ಳುವಂತೆ ಮಾಡಿದ್ದಾಗಿ ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ. ಅಲ್ಲದೆ, ರಶ್ಮಿಕಾ ಕೂಡ ತಾನು ಬರೋಬ್ಬರಿ ಒಂದು ವರ್ಷ ಪ್ರೀತಿ ಮಾಡುವಂತೆ ಆತನ ಹಿಂದೆಯೇ ಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವಿಜಯ್ ವಿರುದ್ಧ ಮುಗಿಬಿದ್ದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ವೃತ್ತಿಜೀವನದಲ್ಲಿ ಅತ್ಯಂತ ಯಶಸ್ವಿ ನಟಿಯಾಗಿದ್ದಾರೆ. ಅಂತಹ ನಟಿಯ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ವಿಜಯ್​ ದೇವರಕೊಂಡ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ಆಕೆಯನ್ನು ಎಲ್ಲರ ಮುಂದೆ ಅವಮಾನಿಸಿದಂತೆ ಕಾಣಿಸುತ್ತಿದೆ ಎಂದು ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇಬ್ಬರ ನಡುವಿನ ಸಂಬಂಧದ ಸಮತೋಲನದ ಬಗ್ಗೆಯೂ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಜಯ್ ದೇವರಕೊಂಡ ತಮ್ಮ ಮದುವೆಯ ಆಹ್ವಾನ ಪತ್ರಿಕೆಗಳಲ್ಲಿ ತಮ್ಮ ಹೆಸರನ್ನು ದೊಡ್ಡದಾಗಿ ಮುದ್ರಿಸಿ, ರಶ್ಮಿಕಾ ಹೆಸರನ್ನು ಬ್ರಾಕೆಟ್‌ನಲ್ಲಿ ಸಣ್ಣ ಅಕ್ಷರಗಳಲ್ಲಿ ಹಾಕಿದ್ದನ್ನು ನೆನಪಿಸಿಕೊಂಡಿರುವ ಕೆಲವರು, ತಾವು ಏನೋ ದೊಡ್ಡ ಉಪಕಾರ ಮಾಡಿದಂತೆ ವರ್ತಿಸುವುದನ್ನು ನೋಡಿದರೆ ಅಸಹ್ಯ ಹುಟ್ಟುತ್ತದೆ ಎಂದು ಕೆಲವರು ಕಟುವಾಗಿ ಟೀಕಿಸಿದ್ದಾರೆ.

ಒಬ್ಬರ ಮೇಲೆ ಮತ್ತೊಬ್ಬರಿಗೆ ಇರುವ ಅತಿ ಹೆಚ್ಚಿನ ಪ್ರೀತಿ ಅಥವಾ ಒಲವು ಕೆಲವೊಮ್ಮೆ ಸಂಬಂಧದಲ್ಲಿ ಒಂದು ಕಡೆಯಿಂದ ನಿರ್ಲಕ್ಷ್ಯಕ್ಕೆ ಅಥವಾ ಹಗುರವಾದ ನಡೆಸಿಕೊಳ್ಳುವಿಕೆಗೆ ಕಾರಣವಾಗಬಹುದು ಎಂದು ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ.

ಕೆಲವರು ವಿಜಯ್ ಅವರದ್ದು ಅಹಂಕಾರಿ ವರ್ತನೆ (Narcissistic) ಎಂದು ನೇರವಾಗಿಯೇ ಆರೋಪಿಸಿದ್ದಾರೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಭರದಲ್ಲಿ ವಿಜಯ್ ಆಡಿರುವ ಮಾತುಗಳು ಮತ್ತು 'ನಾನೇನು ಕೆಟ್ಟವನಲ್ಲ' ಎನ್ನುವ ಧೋರಣೆಯು ಅನೇಕ ವೀಕ್ಷಕರಿಗೆ ಹಿಡಿಸಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಯನ್ನು ಹಾಲಿವುಡ್ ಗಾಯಕಿಯಾದ ಸೆಲೆನಾ ಗೋಮೆಜ್ ಮತ್ತು ಬೆನ್ನಿ ಬ್ಲಾಂಕೊ ಜೋಡಿಗೆ ಹೋಲಿಕೆ ಮಾಡಿ ಮೀಮ್ಸ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ರಶ್ಮಿಕಾ ಅವರಿಗೆ ವಿಜಯ್​ ಮೇಲಿರುವಷ್ಟು ಉತ್ಸಾಹ ವಿಜಯ್​ಗೆ ಇಲ್ಲ. ಆತ ಆಕೆಯ ಫೀಲಿಂಗ್ಸ್​ಗೆ ಸ್ವಲ್ಪವೂ ಬೆಲೆ ಕೊಡುವುದಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಇವರಿಬ್ಬರು ಭವಿಷ್ಯದ ಸಮಂತಾ ಮತ್ತು ನಾಗಚೈತನ್ಯ ಅಂತಾನೂ ಕೆಲವರು ಹೇಳುತ್ತಿದ್ದಾರೆ.

ಒಟ್ಟಾರೆಯಾಗಿ, ಸೆಲೆಬ್ರಿಟಿ ಟಾಕ್ ಶೋನಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಹೋಗಿ ವಿಜಯ್ ದೇವರಕೊಂಡ ಅವರು ಸಾರ್ವಜನಿಕವಾಗಿ ಟೀಕೆಗಳಿಗೆ ಗುರಿಯಾಗುವಂತಾಗಿದೆ. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ವಿಜಯ್ ಅವರ ಈ ಧೋರಣೆಯನ್ನು ಖಂಡಿಸುತ್ತಿದ್ದು, ಪ್ರೀತಿಯ ಸಂಬಂಧದಲ್ಲಿ ಪರಸ್ಪರ ಗೌರವ ಮುಖ್ಯವೇ ಹೊರತು ಹೀಗೆ ಸಾರ್ವಜನಿಕವಾಗಿ ಸಂಗಾತಿಯನ್ನು ಕೆಳಮಟ್ಟದಲ್ಲಿ ಬಿಂಬಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್​).