ಸಿನಿವಾಣಿ

ಆಲಿಯಾಗೆ ತಟ್ಟಿದ ನೆಪೋಟಿಸಂ ಬಿಸಿ: ಸಡಕ್ 2 ಟ್ರೈಲರ್​ಗೆ 70 ಲಕ್ಷ ಡಿಸ್​ಲೈಕ್​ಗಳು

ಆಲಿಯಾ ಭಟ್ ಅಭಿನಯದ ‘ಸಡಕ್ 2’ ಹೊಸ ದಾಖಲೆ ಸೃಷ್ಟಿಸಿದೆ. ಚಿತ್ರದ ಟ್ರೈಲರ್, ಬುಧವಾರವಷ್ಟೇ ಬಿಡುಗಡೆಯಾಗಿದ್ದು, ಒಂದೇ ದಿನದ ಅಂತರದಲ್ಲಿ ಅತೀ ಹೆಚ್ಚು ಜನರ ಅವಕೃಪೆಗೆ ಪಾತ್ರವಾದ ದಾಖಲೆ ಬರೆದಿದೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ಆಲಿಯಾ ಭಟ್, ಜಾಹ್ನವಿ ಕಪೂರ್, ರಣಬೀರ್ ಕಪೂರ್​ರಂತಹ ಚಿತ್ರರಂಗದ ಪ್ರಭಾವಿಗಳ ಮಕ್ಕಳಿಂದ, ಹೊರಗಿನಿಂದ ಬರುವ ಪ್ರತಿಭಾವಂತರಿಗೆ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ ಎಂಬ ಕಲ್ಪನೆ ಜನರಲ್ಲಿದೆ. ಹಾಗೆ ಅವಕಾಶ ಸಿಗದಿದ್ದ ಕಾರಣಕ್ಕೆ ಸುಶಾಂತ್​ರಂತಹ ಪ್ರತಿಭಾವಂತರು ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಅಸಹನೆ ಜನರಲ್ಲಿದೆ. ಆ ಅಸಹನೆ ಇದೀಗ ಡಿಸ್​ಲೈಕ್​ಗಳ ಮೂಲಕ ಹೊರಬಂದಿದೆ.

ಆಲಿಯಾ ಭಟ್ ಅಭಿನಯದ ಹೊಸ ಚಿತ್ರ ‘ಸಡಕ್ 2’ ಈ ತಿಂಗಳ ಕೊನೆಗೆ ಬಿಡುಗಡೆಯಾಗುತಿದ್ದು, ಇತ್ತೀಚೆಗೆ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಹೊಸ ಅಭಿಯಾನವೇ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಯೂಟ್ಯೂಬ್​ನಲ್ಲಿ ಟ್ರೖೆಲರ್ ನೋಡಿದವರು, ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇಷ್ಟವಾದರೆ ಲೈಕ್, ಇಲ್ಲವಾದರೆ ಡಿಸ್​ಲೈಕ್ ಬಟನ್ ಒತ್ತುತ್ತಾರೆ. ಇನ್ನೂ ಕೆಲವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ.

‘ಸಡಕ್ 2’ ಟ್ರೈಲರ್​ಗೆ ಮೂರೂವರೆ ಲಕ್ಷದಷ್ಟು ಲೈಕ್ ಬಿದ್ದರೆ, 70 ಲಕ್ಷದಷ್ಟು ಡಿಸ್​ಲೈಕ್​ಗಳು ಸಿಕ್ಕಿವೆ. ಇದು ಆಲಿಯಾ ಭಟ್ ಬಗ್ಗೆ ಜನರಲ್ಲಿ ಎಷ್ಟು ಆಕ್ರೋಶವಿದೆ ಎಂಬುದಕ್ಕೆ ಉದಾಹರಣೆ ಎಂದು ಬಾಲಿವುಡ್​ನಲ್ಲಿ ಹೇಳಲಾಗುತ್ತಿದೆ.