ಸಿನಿವಾಣಿ

ಟ್ರೇಲರ್​ನೊಂದಿಗೆ ಬಂದೇ ಬಿಟ್ರು ‘ನ್ಯಾನೋ ನಾರಾಯಣಪ್ಪ’

chetannadiger

ಬೆಂಗಳೂರು: 'ಕೆಜಿಎಫ್ ಚಿತ್ರದ ಮೂಲಕ 'ಕೆಜಿಎಫ್ ತಾತ' ಎಂದೇ ಜನಪ್ರಿಯರಾಗಿರುವ ಕೃಷ್ಣಾಜಿ ರಾವ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈಗ ಬ್ಯುಸಿಯಾಗಿದ್ದಾರೆ. ಈ ಮಧ್ಯೆ, ಅವರು ‘ನ್ಯಾನೋ ನಾರಾಯಣಪ್ಪ’ ಎಂಬ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿ ಭರವಸೆ ಮೂಡಿಸಿರುವ ಕುಮಾರ್, ಈ ಚಿತ್ರ ನಿರ್ದೇಶಿಸಿದ್ದಾರೆ. ನಿರ್ಮಾಣ ಮತ್ತು ಕಥೆ-ಚಿತ್ರಕಥೆ ಸಹ ಅವರದ್ದೇ. ಕುಮಾರ್ ಅವರ ಹಿಂದಿನ ಸಿನಿಮಾಗಳಂತೆ, ಈ ಚಿತ್ರದಲ್ಲೂ ಹಾಸ್ಯ ಮತ್ತು ಭಾವನಾತ್ಮಕ ಅಂಶಗಳು ಮಿಕ್ಸ್​ ಮಾಡಿ ಚಿತ್ರಕಥೆ ಮಾಡಲಾಗಿದೆ.

'ಕೆಜಿಎಫ್​​'ನಲ್ಲಿ ಪುಟ್ಟ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಕೃಷ್ಣಾಜಿ ರಾವ್ ಈ ಚಿತ್ರದಲ್ಲಿ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡುವ ಅವರು, 'ಕರೊನಾ ಸಮಯದಲ್ಲಿ ಕುಮಾರ್ ಅವರು ಫೋನ್​ ಮಾಡಿ, ಈ ಚಿತ್ರದಲ್ಲಿ ನಟಿಸುವಂತೆ ಕೇಳಿದರು. ನನಗೆ ಅವರನ್ನು ನೋಡಿ ಶಂಕರ್​ ನಾಗ್​ ನೆನಪಾಯಿತು. ಕುಮಾರ್​ ಸಹ ಶಂಕರ್​ ನಾಗ್​ ತರಹ ಚಟುವಟಿಕೆಯಿಂದ ಓಡಾಡುತ್ತಿದ್ದರು. ಈ ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಿದೆ. ಈ ಚಿತ್ರಕ್ಕೆ ಕುಮಾರ್​ ಅವರು ಹಾಕಿದ ದುಡ್ಡು ವಾಪಸ್ಸಾದರೆ, ನಾಳೆ ಇನ್ನಷ್ಟು ಚಿತ್ರಗಳನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ' ಎಂದರು ಕೃಷ್ಣಾಜಿ ರಾವ್​.

ಚಿತ್ರ ಕುರಿತು ಮಾತನಾಡುವ ನಿರ್ದೇಶಕರು, 'ಇದೊಂದು ಕಾಮಿಡಿ ಎಮೋಷನಲ್ ಸಿನಿಮಾ ಇದಾಗಿದ್ದು, ಕುಟುಂಬ ಸಮೇತ ನೋಡಿ ಎಂಜಾಯ್ ಮಾಡಬಹುದಾದ ಸಬ್ಜೆಕ್ಟ್ ಚಿತ್ರದಲ್ಲಿದೆ' ಎನ್ನುತ್ತಾರೆ. ಶಿವಶಂಕರ ಛಾಯಾಗ್ರಹಣ ಮತ್ತು ಆಕಾಶ್ ಪರ್ವ ಸಂಗೀತವಿದೆ.

‘ನ್ಯಾನೋ ನಾರಾಯಣಪ್ಪ’ ಚಿತ್ರದಲ್ಲಿ ಕೃಷ್ಣಾಜಿ ರಾವ್​ ಜತೆಗೆ ಕಾಕ್ರೋಚ್ ಸುಧಿ, ಪ್ರಶಾಂತ್ ಸಿದ್ದಿ, ಅಕ್ಷತ ಕುಕ್ಕಿ, ಅಪೂರ್ವ ಸೇರಿದಂತೆ ಹಲವರು ನಟಿಸಿದ್ದು, ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.