ಸಿನಿವಾಣಿ

ನಮೋ ಭೂತಾತ್ಮ 2 ಟೀಸರ್​ ರಿಲೀಸ್​ : ಈ ಸರಿ ಹೆದರಿಸುವುದಿಲ್ಲ, ಹೆಚ್ಚು ನಗಿಸುತ್ತೇವೆ ಎಂದ ಕೋಮಲ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕೋಮಲ್​ ಕುಮಾರ್​ ಅಭಿನಯದ ನೃತ್ಯನಿರ್ದೇಶಕ ಮುರಳಿ ಮಾಸ್ಟರ್​ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಸಿನಿಮಾ "ನಮೋ ಭೂತಾತ್ಮ' 2014ರಲ್ಲಿ ರಿಲೀಸ್​ ಆಗಿತ್ತು. ಅದಾಗಿ ಒಂಬತ್ತು ವರ್ಷಗಳ ನಂತರ ಈ ಜೋಡಿ ಸೀಕ್ವಲ್​ನೊಂದಿಗೆ ವಾಪಸ್ಸಾಗಿದೆ. ಇತ್ತೀಚೆಗಷ್ಟೆ ಧ್ರುವ ಸರ್ಜಾ "ನಮೋ ಭೂತಾತ್ಮ 2' ಚಿತ್ರದ ಟೀಸರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

ಕೋಮಲ್​, ""ಲಿಂಗ', "ಪಿಕೆ'ಯಂತಹ ಪರಭಾಷೆಯ ದೊಡ್ಡ ಸಿನಿಮಾಗಳು ಬಂದ ಕಾರಣ "ನಮೋ ಭೂತಾತ್ಮ' ಚಿತ್ರ ನಿರೀಸಿದಷ್ಟು ಯಶಸ್ಸು ಕಾಣಲಿಲ್ಲ. ಆ ಬಳಿಕ ಮುರಳಿ ಮಾಸ್ಟರ್​ಗೆ ಎರಡು ಬಾರಿ ನಿರ್ದೇಶಿಸಲು ಕೇಳಿದ್ದೆ, ಆದರೆ ಅವರು ಬಿಜಿಯಿದ್ದ ಕಾರಣ ಸಾಧ್ಯವಾಗಿರಲಿಲ್ಲ. ನನಗೆ ಮಕ್ಕಳು ಫ್ಯಾನ್ಸ್​​ ತುಂಬ ಇದ್ದಾರೆ. ಹೀಗಾಗಿ ಹಾರರ್​ಗಿಂತ ಹೆಚ್ಚಾಗಿ ಕಾಮಿಡಿ ಈ ಸೀಕ್ವಲ್​ನಲ್ಲಿರಲಿದೆ. ಹೆದರಿಸೋದಕ್ಕಿಂತ ಹೆಚ್ಚಾಗಿ ನಗಿಸಲಿದ್ದೇವೆ' ಎಂದು ಮಾಹಿತಿ ನೀಡಿದರು.

ನಿರ್ದೇಶಕ ಮುರಳಿ ಮಾಸ್ಟರ್​, "ಕರೋನಾಗೆ ಮುನ್ನವೇ ಸಿನಿಮಾ ಕಥೆ ರೆಡಿಯಾಗಿತ್ತು. ಕೋಮಲ್​ ಸರ್​ಗೆ ಕಥೆ ಹೇಳಿದೆವು, ಅವರು ಖುಷಿಯಿಂದ ಒಪ್ಪಿಕೊಂಡು ಸಿನಿಮಾ ಮಾಡಿಕೊಟ್ಟರು. ಪ್ರತಿ ಹಂತದಲ್ಲೂ ನಮ್ಮ ಜತೆಗೆ ನಿಂತು, ಸಪೋರ್ಟ್​ ಮಾಡಿದರು' ಎಂದರು. ನಾಯಕಿ ಲೇಖಚಂದ್ರ, "ಕಷ್ಟಪಟ್ಟು ಎನ್ನುವುದಕ್ಕಿಂತ ಇಷ್ಟಪಟ್ಟು ಮಾಡಿದ ಚಿತ್ರವಿದು. ಟೀಸರ್​ಗೂ ಮೀರಿದ ವಿಷಯಗಳು ಚಿತ್ರದಲ್ಲಿವೆ' ಎಂದು ಹೇಳಿಕೊಂಡರು. ಕೋಮಲ್​, ಲೇಖಚಂದ್ರ ಜತೆ ಹಾಸ್ಯನಟ ಗೋವಿಂದೇಗೌಡ, ಡಾನ್ಸರ್​ ವರುಣ್​ ಮತ್ತು ಮೋನಿಕಾ ಪ್ರಮುಖ ತಾರಾಗಣದಲ್ಲಿದ್ದಾರೆ.