

ಬೆಂಗಳೂರು: ಸ್ಟಾರ್ ನಟ-ನಿರ್ದೇಶಕರ ಭೇಟಿಗಾಗಿ ಅಭಿಮಾನಿಗಳು ಕಾಯುವುದು ಸಹಜ. ತಮ್ಮ ಭೇಟಿಗಾಗಿಯೂ ಹಾಗೆ ಕಾದ ಅಭಿಮಾನಿಗಳಿಗೆ ಇದೀಗ ನಟ-ನಿರ್ದೇಶಕ ರಿಷಬ್ ಶೆಟ್ಟಿ ತಾವು ಕಾಯುತ್ತಿರುವುದಾಗಿ ಹೇಳಿದ್ದಲ್ಲದೆ, ಬಹಿರಂಗ ಆಹ್ವಾನವನ್ನು ಕೂಡ ನೀಡಿದ್ದಾರೆ.
ತಮ್ಮ ಜನ್ಮದಿನದ ಸಂದರ್ಭದಲ್ಲಿ ಅವರು ಇಂಥದ್ದೊಂದು ಭೇಟಿಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದು, ಆ ಮೂಲಕ ಅಭಿಮಾನಿಗಳ ಜತೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿಯವರೇ ಖುದ್ದು ವಿಡಿಯೋ ಸಂದೇಶ ಮೂಲಕ ಆಹ್ವಾನ ನೀಡಿದ್ದಾರೆ.
ಕೆರಾಡಿ ಎಂಬ ಸಣ್ಣ ಹಳ್ಳಿಯಿಂದ ಸಿನಿಮಾ ಕನಸು ಕಟ್ಟಿಕೊಂಡು ಬಂದ ನನಗೆ ಇಷ್ಟೊಂದು ಪ್ರೀತಿ ತೋರಿಸಿದ್ದೀರಿ, ಇಲ್ಲಿಯವರೆಗೆ ಕರೆತಂದಿದ್ದೀರಿ. ನೀವು ಇಷ್ಟೆಲ್ಲ ಪ್ರೀತಿ ತೋರಿದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂದು ಗೊತ್ತಾಗಿಲ್ಲ. ಅದರಲ್ಲೂ 'ಕಾಂತಾರ' ಚಿತ್ರ ಬಿಡುಗಡೆ ಆದಾಗ ತುಂಬಾ ಜನ ಮನೆ ಹತ್ತಿರ ಬಂದಿದ್ದೀರಿ, ಹೋದಹೋದಲ್ಲಿ ನನ್ನ ಭೇಟಿಗೆ ಕಾದಿದ್ದೀರಿ, ಎಷ್ಟೋ ಜನರನ್ನು ನಾನು ಭೇಟಿ ಆಗಲು ಆಗಿರಲಿಲ್ಲ. ಅದಕ್ಕೆ ನನ್ನ ಹುಟ್ಟಿದ ದಿನ ಇದೇ ಜುಲೈ 7ರ ಮಧ್ಯಾಹ್ನ 3ಕ್ಕೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ನಲ್ಲಿ ನಿಮ್ಮನ್ನು ಭೇಟಿಯಾಗಲು ನಾನು ಕಾಯುತ್ತಿರುತ್ತೇನೆ ಎನ್ನುವ ಮೂಲಕ ರಿಷಬ್ ಶೆಟ್ಟಿ ತಮ್ಮ ಅದ್ಧೂರಿ ಜನ್ಮದಿನಾಚರಣೆಗೆ ಅಭಿಮಾನಿಗಳೆಲ್ಲರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.