ಸಿನಿವಾಣಿ

ಪ್ರೇಮಿಗಳ ದಿನದಂದು ಪತ್ನಿ ಜತೆ ಹೊಸ ಬೈಕಲ್ಲಿ ಜಾಲಿರೈಡ್ ಹೋದ ನಟ ವಿವೇಕ್ ಒಬೆರಾಯ್​; ಆಮೇಲಾಯಿತು ವಿವೇಕೋದಯ!

ಮುಂಬೈ: ಪ್ರೇಮಿಗಳ ದಿನದಂದು ಪತ್ನಿ ಜತೆ ತನ್ನ ಹೊಚ್ಚಹೊಸ ಹಾರ್ಲೆ ಡೇವಿಡ್​ಸನ್​ ಬೈಕ್​ನಲ್ಲಿ ಜಾಲಿರೈಡ್ ಹೋಗಿದ್ದ ನಟ ವಿವೇಕ್​ ಒಬೆರಾಯ್​ಗೆ ಅದೊಂದು ಘಟನೆ ವಿವೇಕೋದಯ ಎಂಬಂತಾಗಿದೆ. ಫೆ. 14ರಂದು ಹೊಸ ಬೈಕ್ ಏರಿ ಹೊರಟ ವಿವೇಕ್ ಒಬೆರಾಯ್​, ಅದರ ವಿಡಿಯೋ ತುಣುಕೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ವ್ಯಾಲೆಂಟೈನ್ಸ್​ ಡೇಯಂದು ಎಂಥ ಒಳ್ಳೆಯ ಆರಂಭ. ನಾನು, ನನ್ನ ಪ್ರೀತಿಯ ಪತ್ನಿ ಮತ್ತು 'ಅವನು'.. ಆಹಾ ಎಂಥ ಒಳ್ಳೆಯ ಜಾಲಿರೈಡ್' ಎಂದು ತಮ್ಮ ಹೊಸ ಬೈಕ್​ನಲ್ಲಿನ ಪ್ರಯಾಣದ ವಿಡಿಯೋಗೆ ಕ್ಯಾಪ್ಷನ್​ ಹಾಕಿಕೊಂಡಿದ್ದರು. ಆದರೆ ವಿವೇಕ್​ ಇಂಥದ್ದೊಂದು ವಿಡಿಯೋ ಶೇರ್ ಮಾಡಿದ ಕೆಲವೇ ಹೊತ್ತಿನಲ್ಲಿ ಅದು ವೈರಲ್​ ಆಗಿದ್ದಷ್ಟೇ ಅಲ್ಲ, ಅವರನ್ನು ಇಕ್ಕಟ್ಟಿಗೂ ಸಿಲುಕಿಸಿದೆ. ಏಕೆಂದರೆ ಹೆಲ್ಮೆಟ್​ ಹಾಗೂ ಮಾಸ್ಕ್​ ಧರಿಸದೆ ಹೊರಟ ವಿವೇಕ್​ ಮೇಲೆ ಟ್ರಾಫಿಕ್​ ಪೊಲೀಸರು ದಂಡ ವಿಧಿಸಿದ್ದರೆ, ಮಾಸ್ಕ್​ ಹಾಕದ್ದಕ್ಕೆ ಮುಂಬೈನ ಜುಹು ಪೊಲೀಸರು ಫೆ. 19ರಂದು ಕೇಸ್ ದಾಖಲಿಸಿದ್ದಾರೆ.

ಆ ಬಳಿಕ ತಮ್ಮ ತಪ್ಪಿನ ಕುರಿತು ತಿಳಿದ ವಿವೇಕ್ ಒಬೆರಾಯ್​, ಮತ್ತೆ ಸೋಷಿಯಲ್ ಮೀಡಿಯಾದಲ್ಲೇ ಅದರ ಬಗ್ಗೆ ಹೇಳಿಕೊಂಡು ತಮ್ಮಲ್ಲಿ ಅರಿವು ಮೂಡಿದ್ದನ್ನೂ ತಿಳಿಸಿದ್ದಾರೆ. ಪ್ರೀತಿ ನಮ್ಮನ್ನು ಎಲ್ಲಿಗೆ ತಂದಿಟ್ಟಿತು ನೋಡಿ.. ಹೊಸ ಬೈಕ್​ನಲ್ಲಿ ಹೋಗಿದ್ವಿ ನಾನು ನನ್ನ ಜಾನ್​, ಹೆಲ್ಮೆಟ್​ ಹಾಕದ್ದಕ್ಕೆ ಪೊಲೀಸರು ಕಟ್​ ಮಾಡಿದ್ದು ಚಲನ್​. ಹೆಲ್ಮೆಟ್​ ಇಲ್ಲದೆ ಪ್ರಯಾಣಿಸಿದ್ರೆ ತಪ್ಪಿದ್ದಲ್ಲ ಮುಂಬೈ ಪೊಲೀಸರ ಚೆಕ್​ಮೇಟ್​. ಸುರಕ್ಷತೆ ಎಲ್ಲಕ್ಕಿಂತ ಮುಖ್ಯ ಎಂದು ನನ್ನಲ್ಲಿ ಅರಿವು ಮೂಡಿಸಿದ ಮುಂಬೈ ಪೊಲೀಸರಿಗೆ ಧನ್ಯವಾದ. ಎಲ್ಲರೂ ಹೆಲ್ಮೆಟ್​ ಧರಿಸಿ ಬೈಕ್​ ಚಲಾಯಿಸಿ, ಮಾಸ್ಕ್​ ಹಾಕಿ ಸಂಚರಿಸಿ ಎಂದು ವಿವೇಕ್​ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ