ಸಿನಿವಾಣಿ

250 ರೂ. ಕೊಟ್ಟು ಸಿನಿಮಾ ಟಿಕೆಟ್​ ಖರೀದಿಸಿದರೆ ನಿರ್ಮಾಪಕನಿಗೆ ಸಿಗುವ ಹಣವೆಷ್ಟು ಗೊತ್ತಾ? ಇಲ್ಲಿದೆ ಉತ್ತರ... Movie Producer

Movie Producer : ಇತ್ತೀಚೆಗೆ ಸಂಧ್ಯಾ ಥಿಯೇಟರ್‌ನಲ್ಲಿ ಫುಷ್ಪ 2 ಸಿನಿಮಾದ ಪ್ರೀಮಿಯರ್​ ಶೋ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಮೃತಪಟ್ಟ ಬಳಿಕ ತೆಲಂಗಾಣದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್​ ಪೊಲೀಸರು ಅಲ್ಲು ಅರ್ಜುನ್​ರನ್ನು ಬಂಧಿಸಿದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದರು.

ಇದಿಷ್ಟೇ ಅಲ್ಲದೆ, ಈ ಪ್ರಕರಣ ರಾಜಕೀಯ ತಿರುವು ಸಹ ಪಡೆದುಕೊಂಡಿತು. ಅಲ್ಲು ಅರ್ಜುನ್​ ಬಂಧನದ ಹಿಂದೆ ಸಿಎಂ ರೇವಂತ್​ ರೆಡ್ಡಿ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತು. ಆದರೆ, ಇದನ್ನು ಸಿಎಂ ಅಲ್ಲಗೆಳೆದರು. ಇಷ್ಟಕ್ಕೆ ಸುಮ್ಮನಾಗಿದ್ದರೆ ವಿವಾದ ತಣ್ಣಗಾಗುತ್ತಿತ್ತು. ಆದರೆ, ಅಲ್ಲು ಅರ್ಜುನ್​ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಮತ್ತು ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಸಿಎಂ ಕೂಡ ಇದಕ್ಕೆ ತಿರುಗೇಟು ನೀಡಿದರು. ನಟರಾದವರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕೆಂದರು. ಇದರ ನಡುವೆ ಮೊನ್ನೆ ಅಲ್ಲು ಅರ್ಜುನ್​ ಮನೆ ಮೇಲೆ ಕಲ್ಲು ತೂರಾಟವು ನಡೆದಿತ್ತು. ಕಾಂಗ್ರೆಸ್​ ಕಾರ್ಯತರು ಈ ರೀತಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ಇದೆಲ್ಲದರ ನಡುವೆ ಸಿಎಂ ರೇವಂತ್​ ರೆಡ್ಡಿ ಅವರು ಇನ್ನು ಮುಂದೆ ಯಾವುದೇ ಸಿನಿಮಾಗಳಿಗೆ ಬೆನಿಫಿಟ್ ಶೋಗಳು ಮತ್ತು ಟಿಕೆಟ್ ದರ ಏರಿಕೆಗೆ ಅವಕಾಶ ಇರುವುದಿಲ್ಲ ಎಂದಿದ್ದಾರೆ. ಅಲ್ಲದೆ, ತೆಲಂಗಾಣದ ಸಿನಿಮಾಟೋಗ್ರಫಿ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಕೂಡ ಸಿಎಂ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ಈ ಹೇಳಿಕೆ ಇದೀಗ ಸಂಕ್ರಾಂತಿಗೆ ರಿಲೀಸ್​ ಆಗಲಿರುವ ಸಿನಿಮಾಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ವಾಸ್ತವವಾಗಿ, ಯಾವುದೇ ಸಿನಿಮಾಗಳು ಬಿಡುಗಡೆಯಾದಾಗ ಅದರ ಗಳಿಕೆಯನ್ನು ಮೂರು ರೀತಿಯಲ್ಲಿ ಲೆಕ್ಕಹಾಕಲಾಗುತ್ತದೆ. ಈ ಕಲೆಕ್ಷನ್ ಸಂಖ್ಯೆಯನ್ನು ಸ್ಟಾರ್ ಹೀರೋ ಸಿನಿಮಾಗಳಿಗೆ ಹೆಚ್ಚುವರಿ ಪ್ರಚಾರದ ಸರಕಾಗಿಯೂ ಬಳಸಲಾಗುತ್ತದೆ. ಸಿನಿಮಾ ನಿರ್ಮಾಪಕರು ಕಲೆಕ್ಷನ್​ ಸಂಖ್ಯೆಯನ್ನು ಪೋಸ್ಟರ್‌ಗಳಲ್ಲಿಯೂ ಪ್ರಕಟಿಸಿ ಪ್ರಚಾರ ಮಾಡುತ್ತಾರೆ. ಸಿನಿಮಾ ನೋಡುವ ಪ್ರೇಕ್ಷಕರಿಗೂ ಕಲೆಕ್ಷನ್ ವಿವರ ಗೊತ್ತಾಗುತ್ತದೆ. ಅಭಿಮಾನಿಗಳು ಕೂಡ ಟ್ವಿಟರ್‌ನಲ್ಲಿ ಕಲೆಕ್ಷನ್​ ಸಂಖ್ಯೆಗಳನ್ನು ಹೈಲೈಟ್ ಮಾಡಿ, ತಮ್ಮ ನೆಚ್ಚಿನ ನಟನ ರೇಂಜ್​ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದಾಗ್ಯೂ, ಸಿನಿಮಾದ ನಿಜವಾದ ಕಲೆಕ್ಷನ್​ ವಿಚಾರಕ್ಕೆ ಬರುವುದಾರೆ, ಇಲ್ಲಿ ನಿರ್ಮಾಪಕರು ಮತ್ತು ವ್ಯಾಪಾರದ ಅಂಕಿಅಂಶಗಳಲ್ಲಿ ಕಂಡುಬರುವ ಗ್ರಾಸ್​ (ಒಟ್ಟು), ನೆಟ್​ (ನಿವ್ವಳ) ಮತ್ತು ಷೇರು​ ಅಂಕಿಅಂಶಗಳು ಏನೆಂದು ಹೆಚ್ಚಿನವರಿಗೆ ತಿಳಿದಿಲ್ಲ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನಿರ್ಮಾಪಕ ನಾಗವಂಶಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿವರಣೆ ನೀಡಿದ್ದಾರೆ. ಗ್ರಾಸ್, ನೆಟ್ ಮತ್ತು ಷೇರು ನಡುವಿನ ವ್ಯತ್ಯಾಸವೇನು ಎಂದು ಆ್ಯಂಕರ್​, ನಿರ್ಮಾಪಕರನ್ನು ಕೇಳಿದರು. ಅದಕ್ಕೆ ಉತ್ತರಿಸಿದ ನಾಗವಂಶಿ, ಥಿಯೇಟರ್‌ಗಳಲ್ಲಿ ಟಿಕೆಟ್ ಮಾರಾಟದಿಂದ ಬರುವ ಒಟ್ಟು ಕಲೆಕ್ಷನ್​ ಅನ್ನು ಗ್ರಾಸ್​ ಎಂದು ಕರೆಯಲಾಗುತ್ತದೆ. ಸರ್ಕಾರವು ಅದರಿಂದ ಕೆಲವು ತೆರಿಗೆಯನ್ನು ಕಡಿತಗೊಳಿಸುತ್ತದೆ ಮತ್ತು ಉಳಿದಿದ್ದನ್ನು ನೆಟ್​ (ನಿವ್ವಳ) ಕಲೆಕ್ಷನ್​ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿಯೂ ಪ್ರದರ್ಶಕರು ಮತ್ತು ಥಿಯೇಟರ್‌ಗಳ ಶೇಕಡಾವಾರು ಕಡಿತಗೊಳಿಸಲಾಗುತ್ತದೆ ಮತ್ತು ನಿರ್ಮಾಪಕರಿಗೆ ಬರುವ ಅಂತಿಮ ಪಾಲನ್ನು ಷೇರು ಎಂದು ಲೆಕ್ಕಹಾಕಲಾಗುತ್ತದೆ ಎಂದರು.

ಟಿಕೆಟ್ ದರ 250 ರೂಪಾಯಿ ಇದ್ದರೆ ಅದರಲ್ಲಿ ನಿರ್ಮಾಪಕರಿಗೆ ಕೇವಲ 100 ರೂಪಾಯಿ ಸಿಗುತ್ತದೆ. ಉಳಿದ ಮೊತ್ತದಲ್ಲಿ 18 ಪ್ರತಿಶತದವರೆಗೆ ಸರ್ಕಾರದ ತೆರಿಗೆಯಾಗಿ ಕಡಿತಗೊಳಿಸಲಾಗುತ್ತದೆ. ಚಿತ್ರಮಂದಿರಗಳಲ್ಲಿ ಎಷ್ಟು ವಾರಗಳವರೆಗೆ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ ಎಂಬುದರ ಆಧಾರದ ಮೇಲೆ ಉಳಿದ ಕೆಲವು ಮೊತ್ತವು ಪ್ರದರ್ಶಕರ ಪಾಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಈ ಲೆಕ್ಕಾಚಾರಗಳನ್ನು ನೋಡಿದ ಮೇಲೆ ಸಿನಿಮಾ ಎಷ್ಟೇ ಬ್ಲಾಕ್ ಬಸ್ಟರ್ ಆಗಿದ್ದರೂ ನಿರ್ಮಾಪಕರಿಗೆ ಬರುವ ಅಂತಿಮ ಲಾಭ ಕಡಿಮೆ ಎನ್ನಲಾಗುತ್ತಿದೆ. ಸಿನಿಮಾ ಕಲೆಕ್ಷನ್ ಬಗ್ಗೆ ನಾಗವಂಶಿ ನೀಡಿರುವ ಸ್ಪಷ್ಟನೆಗೆ ಟ್ವಿಟರ್​ನಲ್ಲಿ ವಿಭಿನ್ನ ಕಾಮೆಂಟ್​ಗಳು ಬರುತ್ತಿವೆ. ಮೊದಲು ನಟರ ಸಂಭಾವನೆ ಕಡಿಮೆ ಮಾಡಿದರೆ ನಿರ್ಮಾಪಕರು ಸುರಕ್ಷಿತವಾಗಿ ವ್ಯಾಪಾರ ಮಾಡಬಹುದು ಎನ್ನುತ್ತಿದ್ದಾರೆ. ಅಲ್ಲದೆ, ರನ್ ಟೈಮ್​ಗೆ ತಕ್ಕಂತೆ ಶೂಟಿಂಗ್ ಮಾಡಿದರೆ ಅನಗತ್ಯ ಖರ್ಚು ಬರುವುದಿಲ್ಲ ಎಂದೂ ಹೇಳಲಾಗುತ್ತಿದೆ. (ಏಜೆನ್ಸೀಸ್​)