ಎಡಚರು ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ ಗೊತ್ತಾ? ಗೊತ್ತಿಲ್ಲದಿದ್ದರೆ ಕೇಳಿ. ಜಿಪ್ ಹಾಕುವುದು ಕಷ್ಟ, ಬಾಗಿಲು ತೆಗೆಯುವುದು ಕಷ್ಟ, ಡ್ರೖೆವಿಂಗ್ ಕಷ್ಟ, ಎಟಿಎಂನಲ್ಲಿ ಕಾರ್ಡ್ ಸ್ವೈಪ್ ಮಾಡುವುದು ಕಷ್ಟ ... ಹೀಗೆ ನೂರೆಂಟು ಸಮಸ್ಯೆಗಳನ್ನು ಅವರು ದಿನನಿತ್ಯದ ಅನುಭವಿಸುತ್ತಿರುತ್ತಾರೆ. ಈ ವಿಷಯವನ್ನಿಟ್ಟುಕೊಂಡು ‘ಎಡಗೈ ಅಪಘಾತಕ್ಕೆ ಕಾರಣ’ ಎಂಬ ಚಿತ್ರ ಸೆಟ್ಟೇರುವುದಕ್ಕೆ ಸಜ್ಜಾಗಿದೆ. ಈ ಚಿತ್ರವು ನವೆಂಬರ್ನಲ್ಲಿ ಪ್ರಾರಂಭವಾಗುತ್ತಿದ್ದು, ಇಂದು ವಿಶ್ವ ಎಡಚರ ದಿನದ ಅಂಗವಾಗಿ ಟೀಸರ್ ಬಿಡುಗಡೆಯಾಗುತ್ತಿದೆ.
‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ದಿಗಂತ್ ನಾಯಕನಾಗಿ ನಟಿಸುತ್ತಿದ್ದು, ಹುಬ್ಬಳ್ಳಿಯ ಮೋಹನ್ ಹಿರೇಗೌಡರ್ ನಿರ್ವಿುಸುತ್ತಿದ್ದಾರೆ. ಸಮರ್ಥ್ ಬಿ ಕಡಕೋಳ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಇಡೀ ಜಗತ್ತು ಬಲಚರರಿಗಾಗಿ ಡಿಸೈನ್ ಆಗಿದೆ. ಇದರಿಂದಾಗಿ ಸಾಕಷ್ಟು ಅಪಘಾತಗಳಾಗುತ್ತವೆ. ಅದನ್ನೇ ಮೂಲವಾಗಿಟ್ಟುಕೊಂಡು ಕಥೆ ಮಾಡಿದ್ದೇವೆ. ಇಲ್ಲಿ ನಾಯಕ ಎಡಚರ. ಅವರ ಜೀವನದಲ್ಲೊಂದು ಅಪಘಾತ ಆಗುತ್ತದೆ. ಅದರಿಂದ ಏನೆಲ್ಲ ಆಗುತ್ತದೆ ಎಂಬುದು ಕಥೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ’ ಎನ್ನುತ್ತಾರೆ ಅವರು.
ಈ ಚಿತ್ರದಲ್ಲಿ ದಿಗಂತ್ಗೆ ಇಬ್ಬರು ನಾಯಕಿಯರು ಇರಲಿದ್ದಾರೆ. ನಿರ್ದೇಶಕ ಸಮರ್ಥ್ ಜತೆ ಗುರುದತ್ ಗಾಣಿಗ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದರೆ, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮಾಡುತ್ತಿದ್ದಾರೆ.