ಸಿನಿವಾಣಿ

ಮುಂದಿನ ವರ್ಷದ ಅತೀ ನಿರೀಕ್ಷಿತ ಚಿತ್ರಗಳ್ಯಾವುವು? ಇಲ್ಲಿದೆ ಪಟ್ಟಿ …

ಮುಂಬೈ: ವರ್ಷ ಮುಗಿಯುತ್ತಾ ಬರುತ್ತಿದ್ದಂತೆಯೇ, ಕ್ರಮೇಣ ಚಿತ್ರರಂಗದ ಮತ್ತು ಪ್ರೇಕ್ಷಕರ ಚಿತ್ತ ಮುಂದಿನ ವರ್ಷದ ನೆಟ್ಟಿದೆ. ಈ ವರ್ಷವೇನೋ ಮುಗಿಯಿತು. ಮುಂದಿನ ವರ್ಷ ಯಾವೆಲ್ಲ ಚಿತ್ರಗಳು ಬರುತ್ತಿವೆ, ಯಾವೆಲ್ಲ ಸ್ಟಾರ್​ಗಳು ದೊಡ್ಡ ಮಟ್ಟದಲ್ಲಿ ಮಿಂಚುವುದಕ್ಕೆ ರೆಡಿಯಾಗಿದ್ದಾರೆ, ಯಾವೆಲ್ಲ ಚಿತ್ರಗಳು ಬಾಕ್ಸ್​-ಆಫೀಸ್​ ಉಡೀಸ್​ ಮಾಡುವುದಕ್ಕೆ ತಯಾರಿ ನಡೆಸಿವೆ ಎಂಬಂತ ವಿಷಯಗಳ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ.

ಈ ವರ್ಷ 'RRR', 'ಕೆಜಿಎಫ್​ 2', 'ರಾಧೇ ಶ್ಯಾಮ್​'ನಂತೆ ಮುಂದಿನ ವರ್ಷವೂ ಒಂದಿಷ್ಟು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ದೊಡ್ಡದೊಡ್ಡ ಸ್ಟಾರ್​ಗಳು ತಮ್ಮ ಚಿತ್ರಗಳೊಂದಿಗೆ ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ ಮಾಡುವುದಕ್ಕೆ ತಯಾರಿ ನಡೆಸಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ತಮಿಳಿನಲ್ಲಿ ಒಂದು ದೊಡ್ಡ ಪೈಪೋಟಿ ನಡೆಯಲಿದೆ. ವಿಜಯ್​ ಅಭಿನಯದ 'ವಾರಿಸು' ಮತ್ತು ಅಜಿತ್​ ಅಭಿನಯದ 'ತುನಿವು' ಚಿತ್ರಗಳು ಪೈಪೋಟಿ ನಡೆಸುವುದಕ್ಕೆ ತಯಾರಿ ನಡೆಸಿದ್ದು, ಇದರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಇದಲ್ಲದೆ, ಇನ್ನೊಂದಿಷ್ಟು ಚಿತ್ರಗಳು ನಿರೀಕ್ಷಿತ ಚಿತ್ರಗಳಿವೆ. ಪ್ರಮುಖವಾಗಿ ಮುಂದಿನ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆಯಾಗುವುದಕ್ಕೆ ಶಾರೂಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರ ತಯಾರಿ ನಡೆಸಿದೆ. ಶಾರೂಖ್​ ಖಾನ್​ ಪೂರ್ಣಪ್ರಮಾಣದ ನಾಯಕನಾಗಿ ನಟಿಸಿರುವ ಚಿತ್ರವೊಂದು ಬಿಡುಗಡೆಯಾಗಿ ಕೆಲವು ವರ್ಷಗಳೇ ಆಗಿವೆ. ಹಾಗಾಗಿ, 'ಪಠಾಣ್​' ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.

'ಪಠಾಣ್​' ಅಲ್ಲದೆ, ಕಮಲ್​ ಹಾಸನ್​ ಅಭಿನಯದ 'ಇಂಡಿಯನ್​ 2', ಸಲ್ಮಾನ್​ ಖಾನ್ ಅಭಿನಯದ 'ಕಿಸೀ ಕಾ ಭಾಯ್​ ಕಿಸೀ ಕೀ ಜಾನ್​', ರಣವೀರ್​ ಸಿಂಗ್​ ಅಭಿನಯದ 'ರಾಕಿ ಔರ್​ ರಾಣಿ ಕೀ ಪ್ರೇಮ್​ ಕಹಾನಿ', ಪ್ರಭಾಸ್​ ಅಭಿನಯದ 'ಆದಿಪುರಿಷ್​', ರಜನಿಕಾಂತ್​ ಅಭಿನಯದ 'ಜೈಲರ್​', ಶಾರೂಖ್​ ಖಾನ್​ ಅಭಿನಯದ 'ಜವಾನ್​', ರಣಬೀರ್​ ಕಪೂರ್​ ಅಭಿನಯದ 'ತೂ ಝೂಟಿ ಮೇ ಮಕ್ಕಾರ್​', ಪ್ರಭಾಸ್​ ಅಭಿನಯದ 'ಸಲಾರ್​' ಮತ್ತು ಶಾರೂಖ್​ ಖಾನ್​ ಅಭಿನಯದ 'ಡಂಕಿ' ಚಿತ್ರಗಳು ಬಿಡುಗಡೆಯಾಗುತ್ತಿವೆ.