ಸಿನಿವಾಣಿ

ಹೊಸಬರ ‘ಮೂರು ಮತ್ತೊಂದು’; ಹಾರರ್​ ಮೂಲಕ ಹೆದರಿಸುವ ಪ್ರಯತ್ನ

ಬೆಂಗಳೂರು: ಕನ್ನಡದಲ್ಲಿ ಹಾರರ್ ಥ್ರಿಲ್ಲರ್ ಶೈಲಿಯ ಸಿನಿಮಾಗಳು ಆಗಾಗ ಸದ್ದಿಲ್ಲದೆ ಬರುತ್ತಿರುತ್ತವೆ. ಸುದ್ದಿಯನ್ನೂ ಮಾಡುತ್ತಿರುತ್ತವೆ. ಇದೀಗ "ಮೂರು ಮತ್ತೊಂದು" ಶೀರ್ಷಿಕೆಯ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿಕೊಂಡು ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಪ್ರಶಾಂತ್ ಅಂಕಪುರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು ವಿಪ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೀಣಾ ನಿರ್ಮಿಸುತ್ತಿದ್ದಾರೆ.

ಈ ಚಿತ್ರಕ್ಕೆ ಶೇ.70ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಬಾಕಿ ಇರುವ 4 ಹಾಡುಗಳು ಹಾಗೂ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣವನ್ನು ಚಿಕ್ಕಮಗಳೂರು, ಸಕಲೇಶಪುರ, ಕುಶಾಲನಗರ, ಹಾಸನದ ಸುತ್ತಮುತ್ತ ನಡೆಸಲಾಗುತ್ತದೆ. ಈ ಚಿತ್ರದಲ್ಲಿ ಸಸ್ಪೆನ್ಸ್, ಕಾಮಿಡಿ, ಲವ್ ಸ್ಟೋರಿ ಜೊತೆಗೆ ವಿಭಿನ್ನ ಹಾರರ್ ಕಥಾಹಂದರವನ್ನು ಹೇಳಲಾಗಿದೆ.

"ಮೂರು ಮತ್ತೊಂದು" ಅಂದರೆ ಮೂವರ ನಡುವೆ ಬರುವ ಮತ್ತೊಬ್ಬ ವ್ಯಕ್ತಿ ಯಾರು ಅನ್ನೋದೆ ಚಿತ್ರದ ಸಸ್ಪೆನ್ಸ್. ಹರಹರ ಮಹಾದೇವ, ಜೈಹನುಮಾನ್, ಮಹಾಕಾಳಿ, ಶನಿ, ಗಟ್ಟಿಮೇಳ ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಾಜ್ ಮಣೀಶ್ ಈ ಚಿತ್ರದ ನಾಯಕ, ಮಮತಾ ನಾಯಕಿಯಾಗಿ ನಟಿಸಿದ್ದು, ಇದು ಇವರ ಮೊದಲ ಸಿನಿಮಾ.

ಜೂ.ನರಸಿಂಹರಾಜು, ಮಂಡ್ಯ ಆನಂದ್, ಜಗದೀಶ್ ಪಾತ್ರವರ್ಗದಲ್ಲಿದ್ದಾರೆ. ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಪಳನಿ ಸೇನಾಪತಿ ಸಂಗೀತ, ಕುಶಾಲ್ ಬರಗೂರು ಸಾಹಿತ್ಯ ಹಾಗೂ ಸಂಭಾಷಣೆ, ಹ್ಯಾರಿಸ್ ಜಾನಿ ಸಾಹಸ, ಕಲೈಮಾಸ್ಟರ್ ಅವರ ನೃತ್ಯ ನಿರ್ದೇಶನ ಮಾಡಿದ್ದಾರೆ.