ಸಿನಿವಾಣಿ

ಬಿಗ್​ಬಾಸ್​ನಿಂದ ಹೊರಬಿದ್ದ ಬೆನ್ನಲ್ಲೇ ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ಮೊನಾಲ್​ ಗಜ್ಜರ್​..!

ಹೈದರಾಬಾದ್​: ತೆಲುಗು ಬಿಗ್​ಬಾಸ್​ 4ನೇ ಅವೃತ್ತಿಯಿಂದ ಹೊರಬಿದ್ದ ಬೆನ್ನಲ್ಲೇ ನಟಿ ಮೊನಾಲ್​ ಗಜ್ಜರ್​, ಸಹಸ್ಪರ್ಧಿ ನಟ ಅಭಿಜಿತ್​ ಅಭಿಮಾನಿಗಳ ವಿರುದ್ಧ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಟ್ಟದಾಗಿ ಟ್ರೋಲ್​ ಮಾಡುವ ಮೂಲಕ ಅಭಿಜಿತ್​ ಅಭಿಮಾನಿಗಳು ನನ್ನ ಸಹೋದರಿಯ ಮನಸ್ಸಿಗೆ ನೋವುಂಟು ಮಾಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಮೊನಾಲ್​ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

ಮೊನಾಲ್​ ಬಿಗ್​ಬಾಸ್​ ಹೊರಬೀಳುವ ಮುನ್ನ ಅವರ ಸಹೋದರಿ ಹೇಮಾಲಿ ಬಿಗ್​ಬಾಸ್​ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅಭಿಜಿತ್​ ಬಗ್ಗೆ ಹೇಮಾಲಿ ಮಾಡಿದ ಕಾಮೆಂಟ್​ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದು, ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ. ತುಂಬಾ ಕೆಟ್ಟದಾಗೆಲ್ಲಾ ಟ್ರೋಲ್​ ಮಾಡುತ್ತಿದ್ದಾರೆಂದು ಮೊನಾಲ್​ ದೂರಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿರುವ ಮೊನಾಲ್​, ಅಭಿಜಿತ್​ ನನ್ನ ವಿರುದ್ಧ ಬೆನ್ನ ಹಿಂದೆಯೇ ಮಾತನಾಡಿದರು. ಆ ರೀತಿ ಅವರು ಮಾತನಾಡಬಾರದು. ಅನೇಕ ಬಾರಿ ಆ ರೀತಿ ಮಾತನಾಡಿದ್ದಾರೆ. ಈ ಬಗ್ಗೆ ನನ್ನ ಸಹೋದರಿ ಕಾಮೆಂಟ್​ ಮಾಡಿದ್ದಕ್ಕೆ ಆಕೆಯನ್ನೇ ಕೆಟ್ಟದಾಗಿ ಟ್ರೋಲ್​ ಮಾಡುತ್ತಿದ್ದಾರೆ. ಕೊಲೆ ಬೆದರಿಕೆಯನ್ನು ಹಾಕಿದ್ದಾರೆ. ಹೀಗಾಗಿ ನಾನು ಪೊಲೀಸರಿಗೆ ದೂರು ನೀಡಿದ್ದೇನೆಂದು ತಿಳಿಸಿದ್ದಾರೆ. (ಏಜೆನ್ಸೀಸ್​)