ಮಲಯಾಳಂ ನಟ ದಿಲೀಪ್​ ಮತ್ತು ಪಲ್ಸರ್​ ಸುನಿ 
ಮಾಲಿವುಡ್

ತನ್ನ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಹಣದ ಆಫರ್ ಕೊಟ್ಟಿದ್ರು ನಟಿ: ಪಲ್ಸರ್ ಸುನಿ ಸ್ಫೋಟಕ ಹೇಳಿಕೆ! Pulsar Suni

ಪ್ರಮುಖ ಮುಖ್ಯಾಂಶಗಳು

  • ಅಂತಿಮ ಘಟ್ಟಕ್ಕೆ ತಲುಪಿದ ಖ್ಯಾತ ನಟಿಯ ಕಿಡ್ನಾಪ್, ಲೈಂಗಿಕ ದೌರ್ಜನ್ಯ ಪ್ರಕರಣ
  • ಈ ಪ್ರಕರಣದಿಂದ ನಟ ದಿಲೀಪ್​ರನ್ನು ಕೋರ್ಟ್​ ಖುಲಾಸೆಗೊಳಿಸಿರುವುದು ಅಚ್ಚರಿ ಮೂಡಿಸಿದೆ
  • ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ
  • ಪಲ್ಸರ್​ ಸುನಿ ಈ ಹಿಂದೆ ನೀಡಿದ್ದ ಹೇಳಿಕೆಯೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ
Pulsar Suni : ಸುಮಾರು 8 ವರ್ಷಗಳ ಹಿಂದೆ ಖ್ಯಾತ ನಟಿಯನ್ನು ಕಿಡ್ನಾಪ್​ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಅಂತಿಮ ಘಟ್ಟಕ್ಕೆ ಬಂದಿದೆ. ಈ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಕೂಡ ಕೇಳಿಬಂದಿತು. ಹೀಗಾಗಿ ಅವರನ್ನು ತಪ್ಪಿತಸ್ಥರೆಂದು ಕೋರ್ಟ್​ ತೀರ್ಪು ನೀಡುತ್ತದೆಯೇ ಎಂದು ಕಾಯುತ್ತಿದ್ದರು. ಆದರೆ, ಈ ಪ್ರಕರಣದಿಂದ ದಿಲೀಪ್​ ಅವರನ್ನು ಕೋರ್ಟ್​ ಖುಲಾಸೆಗೊಳಿಸಿರುವುದು ಅಚ್ಚರಿ ಮೂಡಿಸಿದೆ. ಆದರೆ, ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಅತ್ಯಾಚಾರ ಸೇರಿದಂತೆ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ಆದ್ದರಿಂದ, ಅವರಿಗೆ ಗರಿಷ್ಠ ಶಿಕ್ಷೆಯಾಗುವ ಸಾಧ್ಯತೆಯಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ಡಿಸೆಂಬರ್ 12ರ ಶುಕ್ರವಾರ ತೀರ್ಪು ಪ್ರಕಟಿಸಲಿದ್ದಾರೆ.
ಇನ್ನು ಈ ತೀರ್ಪಿನ ನಂತರವೂ ಕೆಲವೊಂದು ಪ್ರಶ್ನೆಗಳು ಮಾತ್ರ ಇನ್ನೂ ಜೀವಂತವಾಗಿಯೇ ಉಳಿದಿವೆ. ನಟಿಯ ಮೇಲೆ ಅವರೇಕೆ ದಾಳಿ ಮಾಡಿದರು? ಅವರಿಗೂ ನಟಿಗೂ ಇರುವ ಸಂಬಂಧವೇನು? ಆ ನಟಿಯನ್ನೇ ಏಕೆ ಗುರಿಯಾಗಿಸಿಕೊಂಡರು? ಇದನೆಲ್ಲ ಅವರು ಯಾರಿಗಾಗಿ ಮಾಡಿದರು? ಎಂಬ ಪ್ರಶ್ನೆಗಳಿವೆ. ಆದರೆ, ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಇದರ ನಡುವೆ ಈ ಪ್ರಕರಣದ ಎ1 ಆರೋಪಿಯಾಗಿರುವ ಪಲ್ಸರ್​ ಸುನಿ ಈ ಹಿಂದೆ ನೀಡಿದ್ದ ಹೇಳಿಕೆಯೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಪ್ರಕರಣದ ಕಾನೂನು ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ಸುನಿ ಮಾಧ್ಯಮಗಳ ಮುಂದೆ ಕೆಲವು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದರು. ತಮ್ಮ ಇಡೀ ಹೇಳಿಕೆಯಲ್ಲಿ ನಟ ದಿಲೀಪ್ ವಿರುದ್ಧ ಶಾಕಿಂಗ್​ ವಿಚಾರಗಳನ್ನು ಬಹಿರಂಗಪಡಿಸಿದ್ದರು. ದಿಲೀಪ್ ತನಗೆ 1.5 ಕೋಟಿ ರೂ.ಗಳ ಆಫರ್​ ನೀಡಿದ್ದರು. ಅದರಲ್ಲಿ 80 ಲಕ್ಷ ರೂಪಾಯಿ ಹಣ ಬಾಕಿ ನೀಡಬೇಕಿದೆ ಎಂದು ಪಲ್ಸರ್ ಸುನಿ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದರು. ಅಲ್ಲದೆ, ದಿಲೀಪ್ ಅವರ ಮ್ಯಾನೇಜರ್ ಅಪ್ಪುನ್ನಿ ವಿರುದ್ಧವೂ ಸುನಿ ಗಂಭೀರ ಆರೋಪ ಮಾಡಿದ್ದರು. ಈ ಸಂಚಿನ ಹಿಂದಿರುವ ರುವಾರಿ ಅಪ್ಪುನ್ನಿಯೇ ಎಂದು ಹೇಳಿದ್ದರು. ಉಳಿದ ಹಣವನ್ನು ನೀಡುವಂತೆ ಜೈಲಿನಿಂದ ಅಪ್ಪುನ್ನಿಗೆ ಕರೆ ಮಾಡಿದಾಗ, ಆತ ಹಣ ಕೊಡಲು ನಿರಾಕರಿಸಿದ. ಅಲ್ಲದೆ, ಏನು ಬೇಕಾದರೂ ಮಾಡು ಆದರೆ, ಹಣ ಕೊಡುವುದಿಲ್ಲ ಎಂದ. ತಾನು ಮೋಸ ಮಾಡುವುದಿಲ್ಲ ಎಂದು ನಂಬಿದ್ದ ದಿಲೀಪ್ ಅವರೇ ಈ ರೀತಿ ಮಾಡಿದಾಗ ಹಣ ಸಿಗುವುದಿಲ್ಲ ಎಂದು ಖಚಿತವಾಯಿತು. ಆತ ಮೋಸ ಮಾಡಿದ ಬಳಿಕ ಇಡೀ ಪ್ರಕರಣದ ಮಾಹಿತಿಯನ್ನು ಪೊಲೀಸರಿಗೆ ಬಹಿರಂಗಪಡಿಸಲು ಆರಂಭಿಸಿದೆ ಎಂದು ಸುನಿ ತಿಳಿಸಿದ್ದರು.
ಮಾತು ಮುಂದುವರಿಸಿದ ಪಲ್ಸರ್​ ಸುನಿ, ದಿಲೀಪ್​ಗೆ ಕರೆ ಮಾಡಿದಾಗಲೆಲ್ಲ ಅಪ್ಪುನ್ನಿ ಉತ್ತರ ನೀಡುತ್ತಿದ್ದ. ಅಪ್ಪುನ್ನಿ, ದಿಲೀಪ್ ಹೇಳಿದಂತೆಯೇ ಮಾತನಾಡುತ್ತಿದ್ದ. ಮಂಜು ಮತ್ತು ಕಾವ್ಯಾಗೆ ತಿಳಿದಿಲ್ಲದ ಎಷ್ಟೋ ವಿಷಯಗಳು ಅಪ್ಪುನ್ನಿಗೆ ತಿಳಿದಿವೆ. ಅಪ್ಪುನ್ನಿ ದಿಲೀಪ್‌ನ ಆತ್ಮಸಾಕ್ಷಿ. ನಾನು ಬಂಧನವಾದ ಎರಡು ತಿಂಗಳವರೆಗೂ ಏನೂ ಮಾಡದೇ ಆತ ಸುಮ್ಮನಾದ. ಆತ ನನ್ನ ಕೈಬಿಡದೇ ಹೋಗಿದ್ದರೆ ನಾನು ಕೂಡ ಆತನಿಗೆ ನಿಯತ್ತಾಗಿ ಇರುತ್ತಿದ್ದೆ ಎಂದು ಪಲ್ಸರ್​ ಸುನಿ ಹೇಳಿದ್ದ.
ನಟಿಯ ಮೇಲೆ ಅತ್ಯಾಚಾರ ಮಾಡಿ, ಅದನ್ನು ರೆಕಾರ್ಡ್​ ಮಾಡಿ ಬ್ಲಾಕ್​ಮೇಲ್​ ಮಾಡುವುದೇ ಉದ್ದೇಶವಾಗಿತ್ತು. ಈ ಬಗ್ಗೆ ನಟಿಗೂ ಮಾಹಿತಿ ನೀಡಲಾಯಿತು. ತನ್ನ ಮೇಲೆ ಯಾವುದೇ ದೌರ್ಜನ್ಯ ಎಸಗದಂತೆ ತಡೆಯಲು ಆಕೆಯು ಕೂಡ ಹಣ ಕೊಡುವುದಾಗಿ ಆಫರ್​ ಮಾಡಿದ್ದಳು. ಆದರೆ, ನಾನು ಆ ಆಫರ್​ ಒಪ್ಪಲಿಲ್ಲ. ನಾನು ದಿಲೀಪ್​ಗೆ ನಿಷ್ಠೆಯಾಗಿದ್ದೆ ಎಂದು ಸುನಿ ಹೇಳಿಕೊಂಡಿದ್ದ. ಅಲ್ಲದೆ, ಮಂಜು ವಾರಿಯರ್ಸ್​ ಜತೆಗಿನ ದಾಂಪತ್ಯ ಜೀವನ ಮುರಿದು ಬಿದ್ದಿದ್ದು ದಿಲೀಪ್ ಹತಾಶೆಗೆ ಕಾರಣವಾಯಿತು. ವಿಡಿಯೋವನ್ನು ತೋರಿಸಿ ಸಂತ್ರಸ್ತ ನಟಿಯನ್ನು ಬ್ಲಾಕ್​ಮೇಲ್​ ಮಾಡುವುದು ದಿಲೀಪ್​ ಪ್ಲಾನ್​ ಆಗಿತ್ತು ಎಂದು ಸುನಿ ಹೇಳಿದ್ದ.
ಅಂದಹಾಗೆ, ಲೈಂಗಿಕ ದೌರ್ಜನ್ಯದ ವಿಡಿಯೋ ಪೊಲೀಸರಿಗೆ ಸಿಕ್ಕಿದಾಗ ಇಡೀ ಪ್ರಕರಣ ಒಂದು ತಿರುವು ಪಡೆದುಕೊಂಡಿತು. ತನ್ನ ವಕೀಲರಿಗೆ ಮೆಮೊರಿ ಕಾರ್ಡ್​ ನೀಡಿದ್ದಾಗಿ ಸುನಿ ಹೇಳಿದ. ಇದಾದ ಬಳಿಕ ಅದನ್ನು ಕೋರ್ಟ್​​ಗೆ ಹಾಜರುಪಡಿಸಲಾಯಿತು. ಆದರೆ, ಹಲ್ಲೆಯನ್ನು ರೆಕಾರ್ಡ್ ಮಾಡಲು ಬಳಸಿದ ಮೊಬೈಲ್ ಫೋನ್ ಎಲ್ಲಿ ಬಚ್ಚಿಡಲಾಗಿದೆ ಎಂಬುದನ್ನು ಸುನಿ ಬಹಿರಂಗಪಡಿಸಲಿಲ್ಲ.
ಅಂತಿಮವಾಗಿ ನ್ಯಾಯಾಲಯ ಇಂದು ದಿಲೀಪ್​ ಅವರನ್ನು ಖುಲಾಸೆಗೊಳಿಸಿ, ಉಳಿದ ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ಪ್ರಕಟಿಸಿದೆ. ಡಿಸೆಂಬರ್ 12ರ ಶುಕ್ರವಾರದಂದು ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ಶಿಕ್ಷೆಯನ್ನು ಪ್ರಕಟಿಸಲಿದ್ದಾರೆ, (ಏಜೆನ್ಸೀಸ್​).