ದೃಶ್ಯಂ 3 ಚಿತ್ರದಲ್ಲಿ ವಿಜಯ್ ಸಲ್ಗಾಂವ್ಕರ್ ಪಾತ್ರದಲ್ಲಿ ನಟಿಸುತ್ತಿರುವ ಅಜಯ್ ದೇವಗನ್
ಮುಂಬೈ: ಭಾರತೀಯ ಸಿನಿಮಾರಂಗದಲ್ಲಿ ಸದ್ಯದ ಮಟ್ಟಿಗೆ ಭಾರೀ ಕುತೂಹಲ ಮೂಡಿಸಿರುವ ಥ್ರೇಲರ್ ಫ್ರಾಂಚೈಸಿ ಇದ್ದರೆ ಅದು ‘ದೃಶ್ಯಂ’. ವಿಜಯ್ ಸಲ್ಗಾಂವ್ಕರ್ (ಅಥವಾ ಜಾರ್ಜ್‌ಕುಟ್ಟಿ) ಮತ್ತು ಆತನ ಕುಟುಂಬದ ರಹಸ್ಯದ ಸುತ್ತ ಗಿರಕಿ ಹೊಡೆಯುವ ಈ ಕಥೆಗಾಗಿ ಪ್ರೇಕ್ಷಕರು ಕಣ್ಣಿಟ್ಟು ಕಾಯುತ್ತಿದ್ದಾರೆ. ಅದರಲ್ಲೂ ಮುಂಬರುವ ‘ದೃಶ್ಯಂ 3’ (Drishyam 3) ಚಿತ್ರದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಈ ಕುರಿತು ಸ್ವತಃ ನಾಯಕ ನಟ ಅಜಯ್ ದೇವಗನ್ ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಗೋವಾದಲ್ಲಿ ನಡೆದ ದೃಶ್ಯಂ 3 ರ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಜಯ್ ದೇವಗನ್, ಹಿಂದಿ ಆವೃತ್ತಿಯು ಮಲಯಾಳಂ ಚಿತ್ರದ ಕೇವಲ ಕಾಪಿ ಅಥವಾ ರಿಮೇಕ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದಿನ ಎರಡು ಭಾಗಗಳು ಮಲಯಾಳಂನಿಂದ ಪ್ರೇರಿತವಾಗಿದ್ದರೂ, ಮೂರನೇ ಭಾಗ ಮಾತ್ರ ಸಂಪೂರ್ಣ ಭಿನ್ನವಾದ ಹಾದಿಯಲ್ಲಿ ಸಾಗಲಿದೆ ಎಂದು ಹೇಳಿದ್ದಾರೆ.
ಮಲಯಾಳಂ ಕಥೆಗೂ ನಮ್ಮದಕ್ಕೂ ಯಾವುದೇ ಸಂಬಂಧವಿಲ್ಲ!
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಜಯ್ ದೇವಗನ್, ಮೋಹನ್ ಲಾಲ್ ಸರ್ ಮತ್ತು ನಿರ್ದೇಶಕ ಜೀತು ಜೋಸೆಫ್ ಅವರ ಮೊದಲ ಹಾಗೂ ಎರಡನೇ ಚಿತ್ರಗಳು ನಮಗೆ ಸ್ಫೂರ್ತಿಯಾಗಿದ್ದವು. ಆದರೆ, ಈ ಬಾರಿ ಹಿಂದಿ 'ದೃಶ್ಯಂ 3' ಸಂಪೂರ್ಣವಾಗಿ ವಿಭಿನ್ನವಾದ ಸ್ಕ್ರಿಪ್ಟ್ ಹೊಂದಿದೆ. ನಾವು ಮೂಲ ಚಿತ್ರದಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದ್ದೇವೆ ಅಂದುಕೊಳ್ಳಬೇಡಿ, ಈ ಬಾರಿ ನಮ್ಮ ಕಥೆ ಸಂಪೂರ್ಣವಾಗಿ ಬೇರೆಯಾಗಿದೆ ಎಂದಿದ್ದಾರೆ.
ಅಲ್ಲದೆ, ಮೂಲ ಚಿತ್ರದ ನಾಯಕ ಮೋಹನ್ ಲಾಲ್ ಅವರು ನಮ್ಮ ಈ ಹೊಸ ಚಿತ್ರವನ್ನು ನೋಡಿ ಇಷ್ಟಪಡುತ್ತಾರೆ ಎಂದು ನಾನು ನಂಬಿದ್ದೇನೆ. ಒರಿಜಿನಲ್ ಸ್ಟಾರ್‌ನಿಂದ ಬರುವ ಅಪ್ರೂವಲ್ ನಮಗೆ ತುಂಬಾ ಮುಖ್ಯ. ಶೀಘ್ರದಲ್ಲೇ ಮೋಹನ್ ಲಾಲ್ ಸರ್‌ಗೆ ಈ ಸಿನಿಮಾ ತೋರಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.
ಹೊಸ ನಿರೂಪಣೆ, ಹೊಸ ತಿರುವುಗಳು!
ಮಲಯಾಳಂನಲ್ಲಿ ಮೋಹನ್ ಲಾಲ್ ನಟನೆಯ 'ದೃಶ್ಯಂ 3' ಜಾರ್ಜ್‌ಕುಟ್ಟಿಯ ರೋಚಕ ಬದುಕನ್ನು ಮುಂದುವರಿಸಿದರೆ, ಹಿಂದಿ ಆವೃತ್ತಿಯಲ್ಲಿ ವಿಜಯ್ ಸಲ್ಗಾಂವ್ಕರ್ ಪಾತ್ರಕ್ಕೆ ತಕ್ಕಂತೆ ಹೊಸ ನಿರೂಪಣೆಯನ್ನು ಸಿದ್ಧಪಡಿಸಲಾಗಿದೆ. ಸ್ಟಾರ್ ಸ್ಟುಡಿಯೋ 18 ಮತ್ತು ಪನೋರಮಾ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರವನ್ನು ಅಭಿಷೇಕ್ ಪಾಠಕ್ ನಿರ್ದೇಶನ ಮಾಡಿದ್ದಾರೆ.
ಈ ಬಾರಿಯೂ ಅಜಯ್ ದೇವಗನ್ ವಿಜಯ್ ಸಲ್ಗಾಂವ್ಕರ್ ಆಗಿ ಅಬ್ಬರಿಸಲಿದ್ದು, ಟಬು ಮತ್ತು ಶ್ರಿಯಾ ಶರಣ್ ತಮ್ಮ ಹಿಂದಿನ ಪಾತ್ರಗಳಲ್ಲೇ ಮುಂದುವರಿಯಲಿದ್ದಾರೆ. ವಿಶೇಷವೆಂದರೆ, ಪ್ರಕಾಶ್ ರಾಜ್ ಜೊತೆಗೆ ಹೆಸರಾಂತ ನಟ ಜೈದೀಪ್ ಅಹ್ಲಾವತ್ ಕೂಡ ಹೊಸ ಪಾತ್ರದೊಂದಿಗೆ ಈ ಸ್ಟಾರ್ ವಲಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ದೃಶ್ಯಂ!
2015ರಲ್ಲಿ ತೆರೆಕಂಡ ಹಿಂದಿಯ ಮೊದಲ 'ದೃಶ್ಯಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 110 ಕೋಟಿ ರೂ. ಬಾಚಿಕೊಳ್ಳುವ ಮೂಲಕ ದೊಡ್ಡ ಗೆಲುವು ಸಾಧಿಸಿತ್ತು. ಇನ್ನು 2022ರಲ್ಲಿ ಬಂದ 'ದೃಶ್ಯಂ 2' ಚಿತ್ರಂತೂ ಬಿರುಗಾಳಿಯಂತೆ ಎದ್ದು ಜಾಗತಿಕವಾಗಿ ಸುಮಾರು 342 ಕೋಟಿ ರೂ. ಗಳಿಸಿ ಭರ್ಜರಿ ಸಕ್ಸಸ್ ಕಂಡಿತ್ತು. ಈಗ 'ದೃಶ್ಯಂ 3' ಕೂಡ ಅದೇ ಮಟ್ಟದ ಅಥವಾ ಅದಕ್ಕಿಂತ ಮೀರಿದ ರಹಸ್ಯಗಳ ರೇಸ್ ಅನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದೆ, (ಏಜನ್ಸೀಸ್).