ನಟಿ ಕಲ್ಯಾಣಿ ಪ್ರಿಯದರ್ಶನ್ (ಎಡ), ನಟಿ ಮಮಿತಾ ಬೈಜು (ಬಲ)
ಕೊಚ್ಚಿ: ಈ ವರ್ಷ ಬರೋಬ್ಬರಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನೇ ನೀಡುವ ಮೂಲಕ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರ ದಾಖಲೆಯನ್ನು ಸರಿಗಟ್ಟಿದ ಮಲಯಾಳಂನ ಯುವ ಜನಪ್ರಿಯ ನಟಿ ಮಮಿತಾ ಬೈಜು (Mamitha Baiju) ಸದ್ಯ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಮಮಿತಾ ನಟನೆಯ ಇತ್ತೀಚಿನ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಕೆಲವೇ ವಾರಗಳ ಹಿಂದೆ ಬಿಡುಗಡೆಗೊಂಡ 'ಬೆತ್ಲೆಹೆಮ್ ಫ್ಯಾಮಿಲಿ ಯೂನಿಟ್' ಚಿತ್ರವು ಇದೀಗ 300 ಕೋಟಿ ಕ್ಲಬ್ ಸೇರಿ ಹೊಸ ದಾಖಲೆಯನ್ನು ನಿರ್ಮಿಸಿದೆ.
25 ಕೋಟಿ ಬಜೆಟ್
ಮಾಲಿವುಡ್ನಲ್ಲಿ ಸಣ್ಣ-ಪುಟ್ಟ ಪಾತ್ರಗಳಿಂದ ಕರಿಯರ್ ಆರಂಭಿಸಿದ ಮಮಿತಾ ಬೈಜು ಈಗ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ನೋಡಿದ್ದಾರೆ. ಗಿರೀಶ್ ಎಡಿ ನಿರ್ದೇಶನದ ಹಾಗೂ ನಟ ನಿವಿನ್ ಪೌಲಿ ಮತ್ತು ಮಮಿತಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಬೆತ್ಲೆಹೆಮ್ ಫ್ಯಾಮಿಲಿ ಯೂನಿಟ್' ಸದ್ಯ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 305 ಕೋಟಿ ರೂ. ಗಳಿಸಿದೆ. ಆ.21ರಂದು ತೆರೆಕಂಡ ಈ ಸಿನಿಮಾ ಇಂದಿಗೂ ಚಿತ್ರಮಂದಿರಗಳಲ್ಲಿ ಸಿನಿಪ್ರಿಯರಿಂದ ತುಂಬಿ ತುಳುಕುತ್ತಿದ್ದು, ನಿರೀಕ್ಷೆಗೂ ಮೀರಿದ ಗಳಿಕೆಗೆ ಮುಖ್ಯ ಕಾರಣವಾಗಿದೆ. ಚಿತ್ರಕ್ಕೆ ಸಿಕ್ಕಿರುವ ಅಪಾರ ಮೆಚ್ಚುಗೆ, ಪ್ರಶಂಸೆಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕರು, ಮಮಿತಾ ನಟನೆಯನ್ನು ಗುಣಗಾನ ಮಾಡಿದ್ದಾರೆ.
"ಮಮಿತಾ ಓರ್ವ ನ್ಯಾಚುರಲ್ ನಟಿ. ಸೂಪರ್ ಶರಣ್ಯ ಚಿತ್ರದಲ್ಲಿ ಆಕೆಯೊಂದಿಗೆ ನಾನು ಕೆಲಸ ಮಾಡಿದ್ದೇನೆ. ಆಗಲೇ ಹೇಳಿದ್ದೆ, ಹೀಗೊಂದು ಸಿನಿಮಾ ನಿಮ್ಮೊಟ್ಟಿಗೆ ಮಾಡುತ್ತೀನಿ ಅಂತ. ಅನಿರೀಕ್ಷಿತ ಎನ್ನುವಂತೆ, ಮಮಿತಾ ನಟಿಸಿದ ಎರಡೂ ಚಿತ್ರಗಳು ಒಂದೊಂದು ವಾರಗಳ ಅವಧಿಯಲ್ಲಿ ರಿಲೀಸ್ ಆಯಿತು. ಆದರೂ ಪರವಾಗಿಲ್ಲ, ವಿಶ್ವನಾಥ್ ಅಂಡ್ ಸನ್ಸ್ ಚಿತ್ರಕ್ಕಿಂತ ನಮ್ಮ ಚಿತ್ರ ಭಿನ್ನವಾಗಿತ್ತು. ನಮ್ಮದು ರೊಮ್ಯಾಂಟಿಕ್-ಕಾಮಿಡಿ ಸಿನಿಮಾವಾದ ಕಾರಣ, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ" ಎಂದರು.
ನಟಿ ಕಲ್ಯಾಣಿ ಚಿತ್ರದ ದಾಖಲೆ ಬ್ರೇಕ್
ಇನ್ನು, ಮಾಲಿವುಡ್ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರವು, ನಟಿ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಲೋಕಃ ಚಾಪ್ಟರ್ 1 ದಾಖಲೆಯನ್ನು ಹಿಂದಿಕ್ಕಿದೆ. 300 ಕೋಟಿ ಕ್ಲಬ್ ಸೇರಿ ತನ್ನದೇ ದಾಖಲೆಯನ್ನು ಮಲಯಾಳಂ ಚಿತ್ರರಂಗದಲ್ಲಿ ಬೆಂಚ್ ಮಾರ್ಕ್ ಆಗಿ ಸೆಟ್ ಮಾಡಿದ್ದ ಕಲ್ಯಾಣಿ ಚಿತ್ರವನ್ನು ಇದೀಗ ಮಮಿತಾ ಹಿಂದಿಕ್ಕಿದ್ದಾರೆ. ಕೇವಲ 25 ಕೋಟಿ ಬಜೆಟ್ನಲ್ಲಿ ತಯಾರಾದ ಬೆಥ್ಲೆಹೆಮ್ ಕುಟುಂಬ ಯೂನಿಟ್ ಈಗ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 305 ಕೋಟಿ ರೂ. ಗಡಿದಾಟಿ ಹೋಗಿದೆ. ಚಿತ್ರವು ಶೀಘ್ರವೇ ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ ಆದ ಜಿಯೋ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗುವ ಮುನ್ಸೂಚನೆಯಿದೆ,(ಏಜೆನ್ಸೀಸ್).