ಮಲಯಾಳಂ ನಟ ದಿಲೀಪ್ ಮತ್ತು ಪಲ್ಸರ್ ಸುನಿ
- ಆ ಕರಾಳ ಘಟನೆ ನಡೆದು ಸುಮಾರು 8 ವರ್ಷಗಳೇ ಕಳೆದಿವೆ
- ಭಾರತೀಯ ಸಿನಿಮಾ ರಂಗವನ್ನೇ ಬೆಚ್ಚಿ ಬೀಳಿಸಿದ ಘಟನೆ ಅದು
- ಖ್ಯಾತ ನಟಿಯನ್ನು 2017, ಫೆಬ್ರವರಿ 17 ರಂದು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ
- ಅಂದು ಅಟ್ಟಹಾಸ ಮೆರೆದ ಪಾಪಿಗಳು ಜೈಲಿಗೆ ಹೋಗುವ ಕಾಲ ಬಂದಿದೆ
ತಿರುವನಂತಪುರ: ಆ ಕರಾಳ ಘಟನೆ ನಡೆದು ಸುಮಾರು 8 ವರ್ಷಗಳೇ ಕಳೆದಿವೆ. ಭಾರತೀಯ ಸಿನಿಮಾ ರಂಗವನ್ನೇ ಬೆಚ್ಚಿ ಬೀಳಿಸಿದ ಘಟನೆ ಅದು. ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮೆರೆಯುತ್ತಿದ್ದ ಪ್ರಖ್ಯಾತ ನಟಿಯನ್ನು 2017, ಫೆಬ್ರವರಿ 17 ರಂದು ಪಲ್ಸರ್ ಸುನಿ ಮತ್ತು ಆತನ ಗ್ಯಾಂಗ್ ಕಿಡ್ನಾಪ್ ಮಾಡಿ ದೈಹಿಕವಾಗಿ ಕಿರುಕುಳ ( Actress Attack Case ) ನೀಡಿ ಅಟ್ಟಹಾಸ ಮೆರೆದಿತ್ತು. ಬಳಿಕ ಧೈರ್ಯ ಮಾಡಿ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತ ನಟಿ ಸಾಕಷ್ಟು ಅವಮಾನಗಳನ್ನು ಎದುರಿಸಿ, 8 ವರ್ಷಗಳ ಸುದೀರ್ಘ ಕಾನೂನು ಹೋರಾಟ ಮಾಡಿದರು. ಅಂತಿಮವಾಗಿ ನಟಿಯ ಹೋರಾಟಕ್ಕೆ ಜಯ ಸಿಕ್ಕಿದೆ. ಅಂದು ಅಟ್ಟಹಾಸ ಮೆರೆದ ಪಾಪಿಗಳು ಜೈಲಿಗೆ ಹೋಗುವ ಕಾಲ ಬಂದಿದೆ.
ಹೌದು, ಇಡೀ ದೇಶದ ಗಮನ ಸೆಳೆದಿರುವ ಪ್ರಕರಣದ ತೀರ್ಪು ಎಂಟು ವರ್ಷಗಳ ನಂತರ ಬರುತ್ತಿದೆ. ಈ ಪ್ರಕರಣದಲ್ಲಿ ನಟ ದಿಲೀಪ್ ಹೆಸರು ಕೂಡ ಕೇಳಿಬಂದಿತು. ಹೀಗಾಗಿ ಅವರನ್ನು ತಪ್ಪಿತಸ್ಥರೆಂದು ಕೋರ್ಟ್ ತೀರ್ಪು ನೀಡುತ್ತದೆಯೇ ಎಂದು ಕಾಯುತ್ತಿದ್ದರು. ಆದರೆ, ಈ ಪ್ರಕರಣದಿಂದ ದಿಲೀಪ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ. ಆದರೆ, ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿದೆ. ಅತ್ಯಾಚಾರ ಸೇರಿದಂತೆ ಅವರ ವಿರುದ್ಧದ ಎಲ್ಲ ಆರೋಪಗಳನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ಆದ್ದರಿಂದ, ಅವರಿಗೆ ಗರಿಷ್ಠ ಶಿಕ್ಷೆಯಾಗುವ ಸಾಧ್ಯತೆಯಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ ವರ್ಗೀಸ್ ಅವರು ಡಿಸೆಂಬರ್ 12ರ ಶುಕ್ರವಾರ ತೀರ್ಪು ಪ್ರಕಟಿಸಲಿದ್ದಾರೆ.
ಈ ಪ್ರಕರಣದ ವಿಚಾರಣೆ 2018 ರಲ್ಲಿ ಪ್ರಾರಂಭವಾಯಿತು. ಆದರೆ, ಕೋವಿಡ್ ಲಾಕ್‌ಡೌನ್‌ನಿಂದಾಗಿ ಎರಡು ವರ್ಷಗಳ ಕಾಲ ವಿಳಂಬವಾಯಿತು. ವಿಚಾರಣೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಯಾವುದೇ ಗಡುವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿ, ಆಕೆಯ ಮೇಲೆ ಹಲ್ಲೆ ನಡೆಸುವುದನ್ನು ದುಷ್ಕರ್ಮಿಗಳು ವಿಡಿಯೋ ರೆಕಾರ್ಡ್ ಮಾಡಿದ್ದರು. ಈ ದೃಶ್ಯಗಳನ್ನು ಹೊಂದಿದ್ದ ಮೆಮೊರಿ ಕಾರ್ಡನ್ನು ಪರಿಶೀಲಿಸಲಾಯಿತು. ಆ ಸಮಯದಲ್ಲಿ ಇದು ಕೂಡ ವಿವಾದಕ್ಕೆ ಕಾರಣವಾಯಿತು.
ಹೀಗಿರುವಾಗ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿತ್ತು. ವಿಚಾರಣೆಗೆ ಒಳಗಾದ ಕೊನೆಯ ವ್ಯಕ್ತಿ ತನಿಖಾಧಿಕಾರಿ ಬೈಜು ಪೌಲೋಸ್ ಅವರು. ವಿಚಾರಣೆಯನ್ನು ಪೂರ್ಣಗೊಳಿಸಲು 109 ದಿನಗಳು ಬೇಕಾಯಿತು. ಪ್ರತಿವಾದಿ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡು ಈ ವರ್ಷದ ಆರಂಭದಲ್ಲೇ ತೀರ್ಪು ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ, ನ್ಯಾಯಾಲಯದ ಕಾರ್ಯವಿಧಾನವು ವಿಳಂಬವಾಗುತ್ತಿದ್ದಂತೆ, ಅಂತಿಮ ತೀರ್ಪು ಕೂಡ ವಿಳಂಬವಾಯಿತು.
ಅಂದಹಾಗೆ, ಈ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಫೆಬ್ರವರಿ 17, 2017 ರಂದು ನಡೆಯಿತು. ಸಂತ್ರಸ್ತ ನಟಿ ತ್ರಿಸ್ಸೂರ್ನಿಂದ ಎರ್ನಾಕುಲಂಗೆ ಸಿನಿಮಾ ಚಿತ್ರೀಕರಣಕ್ಕಾಗಿ ಹೋಗುತ್ತಿದ್ದರು. ಈ ವೇಳೆ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿ, ಆಕ್ಷೇಪಾರ್ಹ ವಿಡಿಯೋವನ್ನು ಸಹ ಚಿತ್ರೀಕರಿಸಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ಅತ್ಯಾಚಾರ, ಪಿತೂರಿ, ಸ್ತ್ರೀತ್ವವನ್ನು ಅವಮಾನಿಸುವುದು, ಅಕ್ರಮ ಬಂಧನ, ಬಲಪ್ರಯೋಗ, ಸಾಕ್ಷ್ಯ ನಾಶ ಮತ್ತು ಅಶ್ಲೀಲ ಚಿತ್ರಗಳನ್ನು ಸೆರೆಹಿಡಿಯುವುದು ಮತ್ತು ಅದನ್ನು ವಿತರಿಸಿದ ಆರೋಪಗಳನ್ನು ಹೊರಿಸಲಾಗಿದೆ.
ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಯಿತು. ಪಿತೂರಿ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಅವರನ್ನು ಬಂಧಿಸಲಾಯಿತು. ಸಂತ್ರಸ್ತೆಯ ಕೋರಿಕೆಯ ಮೇರೆಗೆ ಹೈಕೋರ್ಟ್ ಮಹಿಳಾ ನ್ಯಾಯಾಧೀಶರನ್ನು ನೇಮಿಸಿತು. ವಿಚಾರಣೆಯನ್ನು ರಹಸ್ಯವಾಗಿ ನಡೆಸಲಾಯಿತು. ನಂತರ, ನಿರ್ದೇಶಕ ಬಾಲಚಂದ್ರ ಕುಮಾರ್ ಅವರ ಹೇಳಿಕೆಯ ಆಧಾರದ ಮೇಲೆ ಅಪರಾಧ ವಿಭಾಗವು ಹೆಚ್ಚಿನ ತನಿಖೆ ನಡೆಸಿ ಎರಡನೇ ಆರೋಪಪಟ್ಟಿಯನ್ನು ಸಲ್ಲಿಸಿತು.
ಅಪರಾಧ ವಿಭಾಗದ ಡಿವೈಎಸ್‌ಪಿ ಬೈಜು ಕೆ. ಪೌಲೋಸ್ ತನಿಖಾಧಿಕಾರಿಯಾಗಿದ್ದರು. ಮೊದಲ ಪಟ್ಟಿಯಲ್ಲಿರುವ ಕೆಲವು ಆರೋಪಿಗಳನ್ನು ಕೈಬಿಡಲಾಯಿತು ಮತ್ತು ಇತರರನ್ನು ಸಾಕ್ಷಿಗಳನ್ನಾಗಿ ಮಾಡಲಾಯಿತು. ಪ್ರಕರಣದಲ್ಲಿ 261 ಸಾಕ್ಷಿಗಳಿದ್ದರು. ಸಾಕ್ಷಿಗಳ ವಿಚಾರಣೆ ಮಾತ್ರ 438 ದಿನಗಳನ್ನು ತೆಗೆದುಕೊಂಡಿತು. ಪ್ರಾಸಿಕ್ಯೂಷನ್ 833 ದಾಖಲೆಗಳನ್ನು ಹಾಜರುಪಡಿಸಿತು. ಇದರಲ್ಲಿ 142 ಪುರಾವೆಗಳಿದ್ದವು.
ಪ್ರಕರಣದ ಇತಿಹಾಸ
* ಫೆಬ್ರವರಿ 17, 2017ರಂದು ನಟಿಯ ಮೇಲೆ ಹಲ್ಲೆ ನಡೆಯಿತು. ನಟಿ ಆ ದಿನ ರಾತ್ರಿ ತ್ರಿಸ್ಸೂರ್‌ನಲ್ಲಿರುವ ತನ್ನ ಮನೆಯಿಂದ ಮಾರ್ಟಿನ್ ಹೆಸರಿನ ಚಾಲಕ ಚಲಾಯಿಸುತ್ತಿದ್ದ ಮಹೀಂದ್ರಾ ಎಸ್‌ಯುವಿಯಲ್ಲಿ ಹೊರಟಿದ್ದರು. ಈ ವೇಳೆ ಮಾರ್ಟಿನ್ ಮಾಹಿತಿಯ ಮೇರೆಗೆ, ಪಲ್ಸರ್ ಸುನಿ ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ ಅಂಗಮಾಲಿಯಿಂದ ಅವರನ್ನು ಹಿಂಬಾಲಿಸಿತು. ಮಣಿಕಂಠನ್ ಮತ್ತು ವಿಜೀಶ್ ಎಂಬುವರು ಅದರಲ್ಲಿದ್ದರು. ಟೆಂಪೋ ಟ್ರಾವೆಲ್ಲರ್ ಆಲುವಾದ ಅಥಣಿಯಲ್ಲಿ ನಟಿಯ ವಾಹನಕ್ಕೆ ಡಿಕ್ಕಿ ಹೊಡೆದು ನಕಲಿ ಅಪಘಾತವನ್ನು ಸೃಷ್ಟಿಸಿತು.
* ಬಳಿಕ ಮಾರ್ಟಿನ್ ಕಾರಿನಿಂದ ಕೆಳಗೆ ಇಳಿದು ಜಗಳವಾಡುತ್ತಿರುವಾಗ ಟೆಂಪೋ ಟ್ರಾವೆಲ್ಲರ್ನಿಂದ ಹೊರಬಂದ ಮಣಿಕಂಠನ್ ಮತ್ತು ವಿಜೀಶ್, ಹಿಂದಿನ ಸೀಟಿಗೆ ನುಗ್ಗಿ, ನಟಿಯ ಕೈಗಳನ್ನು ಹಿಡಿದು ಬಾಯಿ ಮುಚ್ಚಿದರು. ಬಳಿಕ ಅದೇ ವಾಹನದಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಅವರು ಕಲಾಮಸ್ಸೆರಿ ತಲುಪಿದಾಗ, ಪ್ರದೀಪ್ ಕೂಡ ಅವರೊಂದಿಗೆ ಸೇರಿಕೊಂಡನು.
* ಕೆಲವು ಆರೋಪಿಗಳು ಎರಡೂ ವಾಹನಗಳನ್ನು ಸರದಿಯಂತೆ ಚಲಾಯಿಸಿದರು. ಚಾಲಕ ಮಾರ್ಟಿನ್ ಈ ವೇಳೆ ಅಸಹಾಯಕನಂತೆ ನಟಿಸಿದನು. ಅವರು ಮಾರ್ಟಿನ್ ನನ್ನು ಪಳರಿವತ್ತಂ-ವೆನ್ನಾಲ ಮಾರ್ಗದಲ್ಲಿ ಇಳಿಸಿದರು. ಈ ವೇಳೆ ಪಲ್ಸರ್ ಸುನಿ ವಾಹನವನ್ನು ಚಲಾಯಿಸಿದನು. ಸಲೀಂ ಮತ್ತು ಮಣಿಕಂದನ್ ಅವನ ಜೊತೆ ಇದ್ದರು.
* ಕಕ್ಕನಾಡ್‌ನಲ್ಲಿ ಸುನಿ, ನಟಿಯ ಎಡಭಾಗದಲ್ಲಿ ಕುಳಿತು, ಸಲೀಮ್‌ಗೆ ಡ್ರೈವಿಂಗ್ ಜವಾಬ್ದಾರಿಯನ್ನು ವಹಿಸಿದನು. ತಮ್ಮ ಕೃತ್ಯಕ್ಕೆ ಸಹಕರಿಸದೇ ಹೋದರೆ ಮಾದಕ ದ್ರವ್ಯ ಸೇವಿಸಿ, ದೃಶ್ಯವನ್ನು ರೆಕಾರ್ಡ್ ಮಾಡುವುದಾಗಿ ಬೆದರಿಕೆ ಹಾಕಿದನು. ನಂತರ ಆಕೆಯನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಿದನು ಮತ್ತು ದೃಶ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದನು. ಈ ಕೃತ್ಯಕ್ಕೆ ಸುಪಾರಿ ನೀಡಿದ ವ್ಯಕ್ತಿ ತನಗೆ ಕರೆ ಮಾಡುತ್ತಾನೆ ಎಂದು ಈ ವೇಳೆ ಪಲ್ಸರ್ ಸುನಿ ಹೇಳಿದನು. ಆದಾಗ್ಯೂ, ನಟ ದಿಲೀಪ್ ಆ ಸಮಯದಲ್ಲಿ ರಾಮಲೀಲಾ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿ, ಆಸ್ಪತ್ರೆಗೆ ದಾಖಲಾಗಿದ್ದರು. ಇದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
* ಸುಮಾರು 2 ಗಂಟೆಗಳ ಕಾಲ ನಟಿಯ ಮೇಲೆ ದೌರ್ಜನ್ಯ ಎಸಗಿದ ಕಿಡಿಗೇಡಿಗಳು, ತಡರಾತ್ರಿ ನಟಿಯನ್ನು ನಿರ್ದೇಶಕ ಲಾಲ್ ಅವರ ಮನೆಯಲ್ಲಿ ಇಳಿಸಿದರು. ಆ ಬಳಿಕ ಈ ಘಟನೆಯ ಬಗ್ಗೆ ಹೊರಜಗತ್ತಿಗೆ ತಿಳಿಯಿತು. ಮುಗ್ಧನಂತೆ ಕಾಣುತ್ತಿದ್ದ ಮಾರ್ಟಿನ್ನನ್ನು ಫೆಬ್ರವರಿ 18 ರಂದು ವಶಕ್ಕೆ ಪಡೆಯಲಾಯಿತು.
* ಈ ಮಧ್ಯೆ, ಡೀಲ್ ಮಾಡಿದ ಪ್ರಕಾರ ನಮಗೆ ಹಣ ಸಿಕ್ಕಿಲ್ಲ ಎಂದು ದಿಲೀಪ್‌ಗೆ ಬೆದರಿಕೆ ಹಾಕಲು ಸುನಿ ಹಲವು ಬಾರಿ ಪ್ರಯತ್ನಿಸಿದ್ದ. ದಿಲೀಪ್‌ನ ನಂಬಿಕಸ್ಥರಿಗೆ ತನ್ನ ಫೋನ್ ಮೂಲಕ ಸುನಿ ಹಲವಾರು ಬಾರಿ ಕರೆ ಮಾಡಿದ್ದ.
* ಫೆಬ್ರವರಿ 18 ರಂದು ಶಂಕಿತರು ಬಳಸುತ್ತಿದ್ದ ಎರಡು ವಾಹನಗಳು ಪತ್ತೆಯಾದವು ಮತ್ತು ವಿಶೇಷ ಶೋಧ ತಂಡವನ್ನು ರಚಿಸಲಾಯಿತು.
* ಫೆಬ್ರವರಿ 19 ರಂದು, ವಡಿವಾಲ್ ಸಲೀಂ ಮತ್ತು ಪ್ರದೀಪ್ ಅವರನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಯಿತು. ಇದರ ನಡುವೆ ನಟಿಗೆ ನೈತಿಕ ಬಲ ತುಂಬಲು ಕೊಚ್ಚಿಯಲ್ಲಿ ಚಲನಚಿತ್ರ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ನಟ ದಿಲೀಪ್ ಸಮ್ಮುಖದಲ್ಲಿ ಪಿತೂರಿ ನಡೆಸಿದ್ದಾರೆ ಎಂದು ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್ ಆರೋಪಿಸಿದರು.
* ಫೆಬ್ರವರಿ 20 ರಂದು ಪಾಲಕ್ಕಾಡ್‌ನಲ್ಲಿ ಮಣಿಕಂದನ್ನನ್ನು ಬಂಧಿಸಲಾಯಿತು.
* ಈ ಪ್ರಕರಣದ ಮೊದಲ ಆರೋಪಿ ಪಲ್ಸರ್ ಸುನಿಯನ್ನು ಫೆಬ್ರವರಿ 23 ರಂದು ಬಂಧಿಸಲಾಯಿತು. ನ್ಯಾಯಾಲಯಕ್ಕೆ ಶರಣಾಗಲು ಬಂದಾಗ ಆತನನ್ನು ಬಂಧಿಸಲಾಯಿತು. ಇದಕ್ಕೂ ಮೊದಲೇ ಅಶ್ಲೀಲ ದೃಶ್ಯಗಳನ್ನು ಒಂದೆಡೆ ಹಸ್ತಾಂತರಿಸಲಾಗಿತ್ತು. ಇದರ ನಡುವೆ ಸುನಿ, ದಿಲೀಪ್‌ನನ್ನು ಭೇಟಿಯಾಗಲು ಸಹ ಪ್ರಯತ್ನಿಸಿದನು.
* ಏಪ್ರಿಲ್ 18 ರಂದು ಅಂಗಮಾಲಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಪಲ್ಸರ್ ಸುನಿ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
* ಏಪ್ರಿಲ್ 20 ರಂದು ವಿಷ್ಣು ಎಂಬ ವ್ಯಕ್ತಿ ತನಗೆ ಕರೆ ಮಾಡಿ 1.5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ದಿಲೀಪ್ ದೂರು ನೀಡಿದರು.
* ಜೂನ್ 25 ರಂದು ಸುನಿಯ ಸಹ ಆರೋಪಿ ವಿಷ್ಣು ಮತ್ತು ಸನಲ್ ದಿಲೀಪ್ ಅವರನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಯಿತು.
* ಜೂನ್ 28 ರಂದು ನಟರಾದ ದಿಲೀಪ್ ಮತ್ತು ನಾದಿರ್ ಶಾ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು.
* ಜುಲೈ 2ರಂದು ದಿಲೀಪ್ ಅವರ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಪಲ್ಸರ್ ಸುನಿ ಇದ್ದ ಫೋಟೋ ಕಾಣಿಸಿಕೊಂಡಿತು.
* ಜುಲೈ 10 ರಂದು ದಿಲೀಪ್ ಅವರನ್ನು ಬಂಧಿಸಲಾಯಿತು. ನಂತರ ಅವರನ್ನು ಅಲುವಾ ಸಬ್-ಜೈಲಿನಲ್ಲಿ ಇರಿಸಲಾಯಿತು.
* ಜುಲೈ 20 ರಂದು ಸಾಕ್ಷ್ಯ ನಾಶಪಡಿಸಿದ್ದಕ್ಕಾಗಿ ಸುನಿ ಅವರ ಮೊದಲ ವಕೀಲ ಪ್ರತೀಶ್ ಚಾಕೊ ಅವರನ್ನು ಬಂಧಿಸಲಾಯಿತು.
* ಪ್ರತಿಶ್ ಚಾಕೊ ಅವರ ಜೂನಿಯರ್ ರಾಜು ಜೋಸೆಫ್ ಅವರನ್ನು ಆಗಸ್ಟ್ 2 ರಂದು ಬಂಧಿಸಲಾಯಿತು.
* ಸೆಪ್ಟೆಂಬರ್ 2 ರಂದು ದಿಲೀಪ್ ಅವರ ತಂದೆಯ ಶ್ರದ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು.
* ಅಕ್ಟೋಬರ್ 3 ರಂದು ಹೈಕೋರ್ಟ್ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದಿಲೀಪ್‌ಗೆ ಜಾಮೀನು ನೀಡಿತು.
* ನವೆಂಬರ್ 21 ರಂದು ದಿಲೀಪ್ ಅವರನ್ನು ವಿದೇಶಕ್ಕೆ ಪ್ರಯಾಣಿಸಲು ಹೈಕೋರ್ಟ್ ಅನುಮತಿ ನೀಡಿತು.
* ನವೆಂಬರ್ 22 ರಂದು ದಿಲೀಪ್ ಅವರನ್ನು ಪೂರಕ ಆರೋಪಪಟ್ಟಿಯಲ್ಲಿ ಎಂಟನೇ ಪ್ರತಿವಾದಿಯನ್ನಾಗಿ ಮಾಡಲಾಯಿತು.
* ಮಾರ್ಚ್ 8, 2018 ರಂದು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಪ್ರಾರಂಭವಾಯಿತು.
* ನವೆಂಬರ್ 29, 2019 ರಂದು, ಸುಪ್ರೀಂ ಕೋರ್ಟ್ ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿತು.
* ಜನವರಿ 30, 2020 ರಂದು ಸಾಕ್ಷ್ಯ ವಿಚಾರಣೆ ಪ್ರಾರಂಭವಾಯಿತು.
* ಡಿಸೆಂಬರ್ 25, 2021 ರಂದು ನಿರ್ದೇಶಕ ಬಾಲಚಂದ್ರ ಕುಮಾರ್ ಅವರು ಕೆಲವು ಪ್ರಮುಖ ಹೇಳಿಕೆಗಳನ್ನು ಬಹಿರಂಗಪಡಿಸಿದರು.
* ಜನವರಿ 4, 2022 ರಂದು ಬಾಲಚಂದ್ರ ಕುಮಾರ್ ಅವರ ಹೇಳಿಕೆಗಳ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲು ಕೋರ್ಟ್ ಅನುಮತಿ ನೀಡಿತು.
* ಸೆಪ್ಟೆಂಬರ್ 17, 2024 ರಂದು ಪಲ್ಸರ್ ಸುನಿಗೆ ಜಾಮೀನು ನೀಡಲಾಯಿತು.
* ಡಿಸೆಂಬರ್ 11, 2024 ರಂದು ಅಂತಿಮ ವಾದಗಳು ಪ್ರಾರಂಭವಾದವು.
* ಪ್ರತಿವಾದಿಯ ವಾದಗಳು ಏಪ್ರಿಲ್ 9, 2025 ರಂದು ಮುಕ್ತಾಯಗೊಂಡವು.
* ಇಂದು ( ಡಿಸೆಂಬರ್ 8, 2025) ತೀರ್ಪು ಪ್ರಕಟಿಸಿದ ನ್ಯಾಯಾಲಯ ನಟ ದಿಲೀಪ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ, ಉಳಿದ ಆರೋಪಿಗಳನ್ನು ತಪ್ಪಿತಸ್ಥರೆಂದು ಹೇಳಿತು. ಅಲ್ಲದೆ, ಡಿಸೆಂಬರ್ 12ರಂದು ಶಿಕ್ಷೆ ಪ್ರಕಟಿಸುವುದಾಗಿ ಹೇಳಿದೆ, (ಏಜೆನ್ಸೀಸ್).