ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸರಿಗಮಪ' ಕಾರ್ಯಕ್ರಮದಲ್ಲಿ ನೀವು ಇವರನ್ನು ಆಗಾಗ ನೋಡಿರಲಿಕ್ಕೇ ಬೇಕು. ಎಲ್ಲಾ ಸೀಸನ್ಗಳ ಕಂಟೆಸ್ಟೆಂಟ್ಗಳಿಗೆ ಮೆಂಟರ್ ಆಗಿ, ಅವರನ್ನು ತಿದ್ದುವ ಡಾ. ಸುಚೇತನ್ ರಂಗಸ್ವಾಮಿ, ಈಗ 'ಮನಸು' ಎಂಬ ಹೊಸ ವಿಡಿಯೋ ಆಲ್ಬಂ ಮಾಡಿದ್ದಾರೆ.
'ಮನಸು ಭಾರವಾದಾಗ ಹಾರುವುದೆಂತೋ, ಕನಸು ಮೂಕವಾದಾಗ ಮಲಗುವುದೆಂತೋ ...' ಎಂಬ ಹಾಡನ್ನು ಬರೆದಿರುವುದಷ್ಟೇ ಅಲ್ಲ, ಈ ಹಾಡನ್ನು ಅವರೇ ಹಾಡಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋದಲ್ಲಿ ಸಹ ಕಾಣಿಸಿಕೊಂಡಿದ್ದಾರೆ.
'ಮನಸು ಭಾರವಾದಾಗ ಹಾರುವುದೆಂತೋ, ಕನಸು ಮೂಕವಾದಾಗ ಮಲಗುವುದೆಂತೋ ...' ಎಂಬ ಸಾಲುಗಳೇ ಹೇಳಿದಂತೆ ಮನಸ್ಸಿನ ತಳಮಳಗಳನ್ನು ಅವರು ಈ ಹಾಡಿನ ಮೂಲಕ ಅದ್ಭುತವಾಗಿ ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದಾರೆ.
ಈ 'ಮನಸು' ಹಾಡಿನ ವಿಡಿಯೋ ಇಡೀಗ ಯೂಟ್ಯೂಬ್ನ ಹೈದ ಸ್ಟುಡಿಯೋಸ್ ಚಾನಲ್ನಲ್ಲಿ ಇದೀಗ ಬಿಡುಗಡೆಯಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚುಹೆಚ್ಚು ಜನಪ್ರಿಯವಾಗುತ್ತಿದೆ. ಈ ಹಾಡಿನಲ್ಲಿ ಸುಚೇತನ್ ಅವರ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆಯ ಜತೆಗೆ ಗಮನಸೆಳೆಯುವ ಇನ್ನೊಂದು ಅಂಶವೆಂದರೆ, ಅದು ಅರುಣ್ ಕುಮಾರ್ ಅವರ ಡ್ರಮ್ಸ್.
ಈ 'ಮನಸು' ಆಲ್ಬಂಗೆ ಸಂಗೀತ ಸಂಯೋಜಿಸಿರುವುದು ಕೀರ್ತನ್ ಹೊಳ್ಳ ಮತ್ತು ನಿಹಾಲ್ ತಾವ್ರೋ. ಇನ್ನು ಇದನ್ನು ನಿರ್ದೇಶನ ಮಾಡಿರುವುದು ಎಂ.ಎಸ್. ಶಿವಾನಿ. ವಿಶೇಷವೆಂದರೆ, ನಟಿ ಕೃತ್ತಿಕಾ ರವೀಂದ್ರ ಅವರು ಈ ವಿಡಿಯೋ ಹಾಡಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಇದುವರೆಗೂ ಮೆಂಟರ್ ಆಗಿ ಹಲವು ಗಾಯಕ-ಗಾಯಕಿಯರನ್ನು ಸಂಗೀತ ಹೇಳಿಕೊಡುವ ಮತ್ತು ತಿದ್ದುವ ಕೆಲಸ ಮಾಡುತ್ತಿದ್ದ ಸುಚೇತನ್ ಅವರು ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಸುಚೇತನ್ ಅವರ ಈ ಮೊದಲ ಹಾಡು ಹೇಗಿದೆ ಎಂಬುದನ್ನು ನೀವೇ ನೋಡಿ ...