ಸೌತ್ ಇಂಡಸ್ಟ್ರಿ ವಿರುದ್ಧ ರಾಧಿಕಾ ಆಪ್ಟೆ ಕಿಡಿ, ನಟಿ ವಿರುದ್ಧ ತಿರುಗಿಬಿದ್ದ ಫ್ಯಾನ್ಸ್. 
ಸಿನಿವಾಣಿ

ಸೋದರಮಾವನ ಜೊತೆ ಮದುವೆ, ವಯಸ್ಸಾದ ನಟನೊಂದಿಗೆ ರೊಮ್ಯಾನ್ಸ್: ಸೌತ್​ ಇಂಡಸ್ಟ್ರಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಧಿಕಾ ಆಪ್ಟೆ; ಭುಗಿಲೆದ್ದ ಆಕ್ರೋಶ! Radhika Apte

ಹೈದರಾಬಾದ್: ಯಾವಾಗಲೂ ತನ್ನ ಖಡಕ್​ ಹಾಗೂ ಬೋಲ್ಡ್ ಹೇಳಿಕೆ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ರಾಧಿಕಾ ಆಪ್ಟೆ ಈಗ ಮತ್ತೊಮ್ಮೆ ತಮ್ಮ ಮಾತಿನ ಮೂಲಕವೇ ಮುನ್ನಲೆಗೆ ಬಂದಿದ್ದಾರೆ. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಕೆಲಸ ಮಾಡಿದ ಕಹಿ ಅನುಭವಗಳನ್ನು ಬಿಚ್ಚಿಟ್ಟಿರುವ ಅವರು, ತಾವು ನಟಿಸಿದ ತೆಲುಗು ಚಿತ್ರವೊಂದರ ಬಗ್ಗೆ ಆಡಿರುವ ಮಾತುಗಳು ಈಗ ಭಾರೀ ಚರ್ಚೆಗೆ ಗ್ರಾಸವಾಗಿವೆ.

"ಆ ಸಿನಿಮಾದ ಪ್ರತಿಯೊಂದು ವಿಷಯವೂ ನನಗೆ ಅಸಹ್ಯ ಹುಟ್ಟಿಸಿತ್ತು" ಎಂದು ಹೇಳುವ ಮೂಲಕ ನಟಿ ತೆಲುಗು ಚಿತ್ರರಂಗದ ಪುರುಷಪ್ರಧಾನ ಧೋರಣೆಯ ವಿರುದ್ಧ ಗುಡುಗಿದ್ದಾರೆ.

"ಸೋದರಮಾವನ ಜತೆ ಮದುವೆ, ವಯಸ್ಸಾದ ನಟನ ಜೊತೆ ರೊಮ್ಯಾನ್ಸ್!":

ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ನಟಿ ಕೀರ್ತಿ ಸುರೇಶ್ ಜೊತೆ ಮಾತನಾಡುತ್ತಿದ್ದ ರಾಧಿಕಾ ಆಪ್ಟೆ, ತಾವು ನಟಿಸಿದ್ದ ಹಳೆಯ ತೆಲುಗು ಚಿತ್ರವೊಂದರ ಕಥೆಯನ್ನು ಮೆಲಕು ಹಾಕಿದ್ದಾರೆ. ಚಿತ್ರದ ಹೆಸರನ್ನು ನೇರವಾಗಿ ಹೇಳದಿದ್ದರೂ, ಅಲ್ಲಿನ ಕಥಾಹಂದರ ಹಾಗೂ ಚಿತ್ರೀಕರಣದ ವಾತಾವರಣ ತಮಗೆ ತೀವ್ರ ಮುಜುಗರ ತಂದಿತ್ತು ಎಂದು ಬಹಿರಂಗಪಡಿಸಿದ್ದಾರೆ.

"ನಾನು ನಟಿಸಿದ ಒಂದು ತೆಲುಗು ಚಿತ್ರದಲ್ಲಿ ನನ್ನ ಪಾತ್ರ ಸ್ವಂತ ಸೋದರಮಾವನನ್ನೇ ಮದುವೆಯಾಗಬೇಕಿತ್ತು. ಅದು ನನಗೆ ತುಂಬಾನೇ ಚಾಲೆಂಜಿಂಗ್ ಮತ್ತು ಕಿರಿಕಿರಿ ಅನಿಸಿದ ಪ್ರಾಜೆಕ್ಟ್. ಆ ಸಿನಿಮಾದ ಪ್ರತಿಯೊಂದು ಸನ್ನಿವೇಶವೂ ನನಗೆ ಅಸಹ್ಯವೆನಿಸಿತ್ತು" ಎಂದು ರಾಧಿಕಾ ಹೇಳಿದ್ದಾರೆ.

ಈ ವೇಳೆ ಪಕ್ಕದಲ್ಲೇ ಇದ್ದ ನಟಿ ಕೀರ್ತಿ ಸುರೇಶ್ ಮಧ್ಯಪ್ರವೇಶಿಸಿ, "ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ, ಅದರಲ್ಲೂ ತಮಿಳು ಮತ್ತು ತೆಲುಗಿನಲ್ಲಿ ಸೋದರಮಾವನನ್ನು ಮದುವೆಯಾಗುವುದು ಸಾಮಾನ್ಯ ಆಚರಣೆಯಾಗಿದೆ" ಎಂದು ಪರಿಸ್ಥಿತಿಯನ್ನು ವಿವರಿಸಲು ಯತ್ನಿಸಿದ್ದಾರೆ.

ಆದರೆ ರಾಧಿಕಾ ತಮ್ಮ ಅಸಮಾಧಾನವನ್ನು ಅಲ್ಲಿಗೇ ನಿಲ್ಲಿಸಲಿಲ್ಲ. "ಕೇವಲ ಕಥೆ ಮಾತ್ರವಲ್ಲ, ನನಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವರಾಗಿದ್ದ ಹಿರಿಯ ನಟನ ಜೊತೆ ನಾನು ರೊಮ್ಯಾಂಟಿಕ್ ಸೀನ್‌ಗಳಲ್ಲಿ ನಟಿಸಬೇಕಿತ್ತು. ಸೆಟ್‌ನಲ್ಲಿದ್ದ ಇಡೀ ವಾತಾವರಣ ಸಂಪೂರ್ಣವಾಗಿ ಪುರುಷ ಪ್ರಧಾನವಾಗಿತ್ತು.

ಚಿತ್ರದ ಅರ್ಧದಲ್ಲೇ ನನ್ನ ಪಾತ್ರ ಸತ್ತುಹೋಗುತ್ತದೆ. ಆ ನಟ ನನ್ನ ದೇಹವನ್ನು ಹೆಗಲ ಮೇಲಿಂದ ಕೆಳಗೆ ಎಸೆದು ಫೈಟಿಂಗ್ ಮಾಡಬೇಕಿತ್ತು. ಆ ಸೀನ್ ಶೂಟ್ ಮಾಡುವಾಗ, ‘ನಾನು ಯಾವಾಗ ಸಾಯುತ್ತೇನೋ ದೇವ್ರೆ!’ ಅಂತ ಮನಸ್ಸಿನಲ್ಲೇ ಅಂದುಕೊಂಡಿದ್ದೆ" ಎಂದು ನಕ್ಕಿದ್ದಾರೆ.

ಆಪ್ಟೆ ಆರೋಪ ಮಾಡಿದ್ದು ಸಿನಿಮಾ ಯಾವುದು?

ರಾಧಿಕಾ ಆಪ್ಟೆ ಸಿನಿಮಾದ ಹೆಸರನ್ನು ಹೇಳದಿದ್ದರೂ, ಸೋಷಿಯಲ್ ಮೀಡಿಯಾ ಮಂದಿ, ಅವರ ಈ ಹೇಳಿಕೆ ಹೊರಬರುತ್ತಿದ್ದಂತೆಯ ಅದು ನಂದಮೂರಿ ಬಾಲಕೃಷ್ಣ ನಟನೆಯ 2014 ರ ಬ್ಲಾಕ್‌ಬಸ್ಟರ್ 'ಲೆಜೆಂಡ್' (Legend) ಚಿತ್ರವೇ ಎಂದು ಕನ್ಫರ್ಮ್ ಮಾಡಿದ್ದಾರೆ.

ಬೋಯಾಪತಿ ಶ್ರೀನು ನಿರ್ದೇಶನದ ‘ಲೆಜೆಂಡ್’ ಚಿತ್ರದಲ್ಲಿ ರಾಧಿಕಾ ಆಪ್ಟೆ, ಬಾಲಕೃಷ್ಣ ಅವರ ಸೋದರಸೊಸೆಯಾಗಿ ನಟಿಸಿದ್ದರು ಹಾಗೂ ಮಧ್ಯದಲ್ಲೇ ವಿಲನ್‌ಗಳಿಂದ ಕೊಲೆಯಾಗುವ ದೃಶ್ಯವಿತ್ತು. ಆ ಸಿನಿಮಾ ರಿಲೀಸ್ ಆದಾಗ ಬಾಲಕೃಷ್ಣ ಅವರ ವಯಸ್ಸು 54 ವರ್ಷ ಆಗಿದ್ದರೆ ರಾಧಿಕಾ ಆಪ್ಟೆಗೆ ಕೇವಲ 29 ವರ್ಷ ವರ್ಷವಾಗಿತ್ತು. ಹೀಗಾಗಿ ರಾಧಿಕಾ ಬಾಲಯ್ಯ ಅವರನ್ನೇ ಟಾರ್ಗೆಟ್ ಮಾಡಿ ಈ ಮಾತುಗಳನ್ನಾಡಿದ್ದಾರೆ ಎಂದು ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.

ಭುಗಿಲೆದ್ದ ಆಕ್ರೋಶ: "ಅಂದು ದುಡ್ಡು ತಗೊಂಡು, ಇಂದು ಟೀಕಿಸೋದಾ?"

ರಾಧಿಕಾ ಅವರ ಈ ಹಳೇ ಕಥೆಗೆ ತೆಲುಗು ಚಿತ್ರಪ್ರೇಮಿಗಳು ಮತ್ತು ಬಾಲಯ್ಯ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಚಿತ್ರಕ್ಕೆ ಸಹಿ ಹಾಕುವ ಮುನ್ನವೇ ಕಥೆ ಮತ್ತು ಹೀರೋ ಯಾರು ಎಂಬುದು ನಿಮಗೆ ತಿಳಿದಿರಲಿಲ್ಲವೇ? ಆಗ ಚೆನ್ನಾಗಿ ದುಡ್ಡು ಪಡೆದು ನಟಿಸಿ, ಈಗ ವರ್ಷಗಳ ನಂತರ ಚಿತ್ರರಂಗವನ್ನು ಪುರುಷಪ್ರಧಾನ ಎಂದು ತೆಗಳುವುದು ಎಷ್ಟು ಸರಿ?" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೊಬ್ಬರು, "ಬಹುತೇಕ ತೆಲುಗು ಜನರಿಗೆ ಆಕೆ ಪರಿಚಯವಾಗಿದ್ದೇ ‘ಲೆಜೆಂಡ್’ ಚಿತ್ರದಿಂದ. ಆದರೆ ಇವತ್ತು ಅದೇ ತೆಲುಗು ಸಂಸ್ಕೃತಿ ಮತ್ತು ಸಿನಿಮಾವನ್ನು ಆಕೆ ಅಸಹ್ಯ ಎಂದು ಕರೆಯುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).