ಬೆಂಗಳೂರು: ಮಂಸೋರೆ ನಿರ್ದೇಶನದಲ್ಲಿ '19.20.21' ಎಂಬ ಚಿತ್ರ ಮೂಡಿಬರುತ್ತಿರುವ ವಿಷಯ ಗೊತ್ತೇ ಇದೆ. ಕೆಲವು ತಿಂಗಳ ಹಿಂದೆಯೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಕ್ತಾಯದ ಹಂತಕ್ಕೆ ಬಂದಿದೆ. ಚಿತ್ರವು ಡಿಸೆಂಬರ್ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮತ್ತೊಂದು ಮಠ: 25 ಜಿಲ್ಲೆ, 70 ಮಠಗಳಲ್ಲಿ ಚಿತ್ರೀಕರಣ
ಹೌದು, ಮಂಸೋರೆ ನಿರ್ದೇಶನದ '19.20.21' ಚಿತ್ರವು ಇದೀಗ ಕೊನೆಯ ಹಂತ ತಲುಪಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಅನುಮತಿ ಸಿಗುತ್ತಿದ್ದಂತೆಯೇ ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಲಾಗುತ್ತದೆ ಎಂದು ಮಂಸೋರೆ ಹೇಳಿಕೊಂಡಿದ್ದಾರೆ.
ಈಗಾಗಲೇ ಚಿತ್ರದ ಪೋಸ್ಟರ್ಗಳು ಬಿಡುಗಡೆಯಾಗಿದ್ದು, ಮಂಸೋರೆ ಅವರ ಹಿಂದಿನ ಸಿನಿಮಾಗಳಂತೆ ಈ ಚಿತ್ರ ಕೂಡ ವಿಭಿನ್ನವಾಗಿರಲಿವೆ ಎಂಬ ಸುಳಿವನ್ನು ಪೋಸ್ಟರ್ಗಳು ನೀಡಿವೆ. ನೈಜ ಘಟನೆಗಳನ್ನು ಆಧರಿಸಿ ಮಾಡಲಾದ ಈ ಚಿತ್ರವು ಸೋಶಿಯಲ್ ಥ್ರಿಲ್ಲರ್ ಜಾನರ್ಗೆ ಸೇರಿದೆ.
ರಂಗಭೂಮಿ ಕಲಾವಿದ ಶೃಂಗ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, 'ಉಗ್ರಂ' ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ.
ಶಿವು ಬಿ ಕೆ ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಬಿಂದು ಮಾಲಿನಿ ಸಂಗೀತ ಇರುವ ಈ ಚಿತ್ರಕ್ಕೆ ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ ರಚಿಸಿದ್ದಾರೆ. 'ಆಕ್ಟ್ 1978' ಮತ್ತು 'ಉದ್ಘರ್ಷ' ಚಿತ್ರಗಳನ್ನು ನಿರ್ಮಿಸಿದ್ದ ದೇವರಾಜ್ ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.