ಮುಂಬೈ: ಆ ಕಡೆ ಹೃತಿಕ್ ರೋಶನ್ ... ಈ ಕಡೆ ಮನೋಜ್ ಬಾಜ್ಪೇಯಿ ... ಇಬ್ಬರೂ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡರೆ ಹೇಗಿರುತ್ತದೆ ಹೇಳಿ? ಇಬ್ಬರ ಅಭಿಮಾನಿಗಳು ಸೆಂಟ್ ಪರ್ಸೆಂಟ್ ಖುಷಿಯಾಗುತ್ತಾರೆ ಎಂಬ ಕಾರಣಕ್ಕೇ ಅವರಿಬ್ಬರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನವೊಂದು ಬಾಲಿವುಡ್ನಲ್ಲಿ ಸದ್ದಿಲ್ಲದೆ ಆಗಿತ್ತು. ಆದರೆ, ಆ ಪ್ರಯತ್ನಕ್ಕೆ ಇದೀಗ ಹಿನ್ನೆಡೆ ಉಂಟಾಗಿದೆ.
'ದಿ ನೈಟ್ ಮ್ಯಾನೇಜರ್' ಎಂಬ ಜನಪ್ರಿಯ ವೆಬ್ಸೀರೀಸ್ನ ಭಾರತೀಯ ರೀಮೇಕ್ನಲ್ಲಿ ಹೃತಿಕ್ ನಟಿಸುತ್ತಿರುವ ವಿಷಯ ಗೊತ್ತಿರಬಹುದು. ಡಿಸ್ನಿ ಹಾಟ್ಸ್ಟಾರ್ನಲ್ಲಿ ಮುಂದಿನ ವರ್ಷ ಪ್ರಸಾರವಾಗಲಿರುವ ಈ ವೆಬ್ಸರಣಿಯಲ್ಲಿ, ಮನೋಜ್ ಬಾಜ್ಪೇಯಿ ಸಹ ಒಂದು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಇದೀಗ ಮನೋಜ್ ಬಾಜ್ಪೇಯಿ ಈ ಸರಣಿಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, 'ದಿ ನೈಟ್ ಮ್ಯಾನೇಜರ್'ನ ರೀಮೇಕ್ನಿಂದ ಮನೋಜ್ ಬಾಜ್ಪೇಯಿ ಹೊರಬಂದಿದ್ದಾರಂತೆ. ಅದಕ್ಕೆ ಕಾರಣ ಡೇಟ್ ಸಮಸ್ಯೆ. ಮನೋಜ್ ಕೆಲವು ಸಿನಿಮಾಗಳಿಗೆ ಈ ಮುನ್ನ ಡೇಟ್ಸ್ ನೀಡಿದ್ದರಂತೆ. ಆದರೆ, ಕರೊನಾ ಮತ್ತು ಲಾಕ್ಡೌನ್ನಿಂದ ಅವೆಲ್ಲವೂ ಮುಂದಕ್ಕೆ ಹೋಗಿದೆ. ಅವೆಲ್ಲದರ ಚಿತ್ರೀಕರಣ ಲಾಕ್ಡೌನ್ ಮುಗಿದ ನಂತರ ಶುರುವಾಗಲಿದೆ. ಈ ಮಧ್ಯೆ, 'ದಿ ನೈಟ್ ಮ್ಯಾನೇಜರ್'ನ ರೀಮೇಕ್ನ ಚಿತ್ರೀಕರಣ ಸಹ ಲಾಕ್ಡೌನ್ ಮುಗಿದ ಮೇಲೆ ಶುರುವಾಗುವುದರಿಂದ, ಅದಕ್ಕೆ ಡೇಟ್ಸ್ ಹೊಂದಿಸುವುದು ಮನೋಜ್ಗೆ ಕಷ್ಟವಾಗುತ್ತಿದೆಯಂತೆ. ಅದೇ ಕಾರಣಕ್ಕೆ ಅವರು ವೆಬ್ಸರಣಿಗೆ ಗುಡ್ಬೈ ಹೇಳಿದ್ದಾರೆ ಎಂಬ ಸುದ್ದಿ ಇದೆ.
ಹೃತಿಕ್ಗೆ ಇದೇ ಮೊದಲ ಬಾರಿಗೆ ವೆಬ್ಸೀರೀಸ್ನಲ್ಲಿ ನಟಿಸುತ್ತಿದ್ದು, ಅದರ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು, ಮನೋಜ್ ಈಗಾಗಲೇ 'ದಿ ಫ್ಯಾಮಿಲಿ ಮ್ಯಾನ್' ಮತ್ತು 'ದಿ ಫ್ಯಾಮಿಲಿ ಮ್ಯಾನ್ 2'ನಲ್ಲಿ ಅಭಿನಯಿಸಿದ್ದು, ಈ ಪೈಕಿ 'ದಿ ಫ್ಯಾಮಿಲಿ ಮ್ಯಾನ್ 2' ಜೂನ್ ನಾಲ್ಕರಿಂದ ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗಲಿದೆ.