ಚೆನ್ನೈ: ಕಮಲ್ ಹಾಸನ್ ಮತ್ತು ಮಣಿರತ್ನಂ ಮತ್ತೆ ಯಾಕೆ ಒಟ್ಟಿಗೆ ಚಿತ್ರ ಮಾಡುತ್ತಿಲ್ಲ ಎಂಬ ಪ್ರಶ್ನೆ ಹಲವು ವರ್ಷಗಳಿಂದ ಇದ್ದೇ ಇತ್ತು. 1987ರಲ್ಲಿ ಬಿಡುಗಡೆಯಾದ 'ನಾಯಕನ್' ಚಿತ್ರದ ನಂತರ ಅವರಿಬ್ಬರೂ ಒಟ್ಟಿಗೆ ಕೆಲಸ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಅವರಿಬ್ಬರು ಯಾವಾಗ ಮತ್ತೆ ಒಟ್ಟಾಗಿ ಚಿತ್ರ ಮಾಡಬಹುದು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಮಣಿರತ್ನಂ ನಿರ್ದೇಶನದಲ್ಲಿ ಒಂದು ಚಿತ್ರ ಮಾಡುತ್ತಿರುವುದಾಗಿ ಸ್ವತಃ ಕಮಲ್ ಹಾಸನ್, ಭಾನುವಾರ ಘೋಷಿಸಿದ್ದಾರೆ. ಕಮಲ್ ಹಾಸನ್ ಅವರ ರಾಜ್ಕುಮಲ್ ಫಿಲಂಸ್, ಮಣಿರತ್ನಂ ಅವರ ಮದರಾಸ್ ಟಾಕೀಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜಯಂಟ್ ಮೂವೀಸ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದೆ. ಮಣಿರತ್ನಂ ಎಂದಿನಂತೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅವರ ಖಾಯಂ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಅಂದಹಾಗೆ, ಇದು ಕಮಲ್ ಹಾಸನ್ ಅಭಿನಯದ 234ನೇ ಚಿತ್ರವಾಗಿದ್ದು, ಮುಂದಿನ ವರ್ಷ ಪ್ರಾರಂಭವಾಗಲಿದೆ, 2024ಕ್ಕೆ ಈ ಚಿತ್ರ ಬಿಡುಡೆಯಾಗಲಿದೆ.