ಬೆಂಗಳೂರು: ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ತಾಜ್ ಹೋಟೆಲ್ಗೆ ನುಗ್ಗಿ ಉಗ್ರರ ಹುಟ್ಟಡಗಿಸಿ, ವೀರಮರಣವನ್ನಪ್ಪಿದ ಬೆಂಗಳೂರಿನ ಹುಡುಗ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಚಿತ್ರ 'ಮೇಜರ್'. ಶಶಿಕಿರಣ್ ಟಿಕ್ಕಾ ನಿರ್ದೇಶನದ ಈ ಬಯೋಪಿಕ್ನಲ್ಲಿ ಅಡಿವಿ ಶೇಷ್, ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸಿದ್ದಾರೆ. ನಾಳೆ (ಜೂನ್ 03) ಚಿತ್ರವು ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು.
ಭಯೋತ್ಪಾದಕ ದಾಳಿ ಹಾಗೂ ಸಂದೀಪ್ ಹೋರಾಟವನ್ನಷ್ಟೇ ಅಲ್ಲದೇ, ಅವರ ಬಾಲ್ಯ, ಶಾಲಾ ದಿನಗಳು, ಲವ್ಸ್ಟೋರಿ, ಮದುವೆ, ಸೇನೆಗೆ ಆಯ್ಕೆಯಾಗಿದ್ದು, ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದು, ತಂದೆ&ತಾಯಿ ಜತೆಗಿನ ಬಾಂಧವ್ಯ, ಗೆಳೆಯರ ಜತೆಗಿನ ಒಡನಾಟ... ಹೀಗೆ ಸಂದೀಪ್ ಅವರ ಸಂಪೂರ್ಣ ಕಥೆಯನ್ನ ಈ ಬಯೋಪಿಕ್ನಲ್ಲಿ ಚಿತ್ರಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ಅಡಿವಿ ಶೇಷ್, 'ದೇಶಾದ್ಯಂತ 10 ಕಡೆಗಳಲ್ಲಿ ಸ್ಪೆಷಲ್ ಶೋ ಆಯೋಜಿಸಿದ್ದೆವು. ಅದರಲ್ಲಿ ಮುಂಬೈನ ಎನ್ಎಸ್ಜಿ (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್) ಕೂಡ ಒಂದು. ಸಂದೀಪ್ ಉನ್ನಿಕೃಷ್ಣನ್ ಸರ್ ಕೂಡ ಎನ್ಎಸ್ಜಿಯಲ್ಲಿದ್ದವರೇ. ಹೀಗಾಗಿ ಎನ್ಎಸ್ಜಿಯ ಕಮಾಂಡೋಗಳಿಗೆ ಸಿನಿಮಾ ಇಷ್ಟವಾಗದಿದ್ದರೆ? ಎಂಬ ಆತಂಕವೂ ಇತ್ತು. ಸುಮಾರು 312 ಮಂದಿ ಕಮಾಂಡೋಗಳು ಸಿನಿಮಾ ನೋಡಿದರು. ಬಳಿಕ ನನ್ನನ್ನು ಹೆಡ್ಕ್ವಾರ್ರ್ಟಸ್ಗೆ ಕರೆದೊಯ್ದರು. ಅಲ್ಲಿ ನನಗೆ ಎನ್ಎಸ್ಜಿ ಬ್ಲಾಕ್ ಕ್ಯಾಟ್ ಕಮಾಂಡೋಸ್ನ ಪದಕ ನೀಡಿದರು' ಎಂದು ಪದಕವನ್ನೂ ತೋರಿಸಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಿತ್ರದ ನಾಯಕ ಅಡಿವಿ ಶೇಷ್, ನಾಯಕಿ ಸಾಯಿ ಮಂಜ್ರೇಕರ್ ಹಾಗೂ ನಿರ್ದೇಶಕ ಶರತ್ ಚಂದ್ರಹಾಜರಿದ್ದರು.
ನಂತರ ಚಿತ್ರತಂಡವು ಬೆಂಗಳೂರಿನಲ್ಲಿ ಸಂದೀಪ್ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಸಂದೀಪ್ ತಂದೆ ಕೆ. ಉನ್ನಿಕೃಷ್ಣನ್ ನಾಯರ್ ಹಾಗೂ ತಾಯಿ ಧನಲಕ್ಷ್ಮಿ ಉನ್ನಿಕೃಷ್ಣನ್ ಚಿತ್ರ ನೋಡಿ ಗದ್ಗದಿತರಾದರು.