ಸಿನಿವಾಣಿ

ಮಗ ಜನಿಸಿದಾಗ, ನನ್ನ ಅಂಗೈನಷ್ಟೆ ಅಗಲ, ಎತ್ತರ ಇದ್ದ: ಸಮಾಜ ಸೇವೆಯ ಬಗ್ಗೆ ಪ್ರಿನ್ಸ್ ಹೇಳಿದ್ದೇನು?

ಹೈದರಾಬಾದ್: ಟಾಲಿವುಡ್​ನ ಪ್ರಿನ್ಸ್ ನಟ ಮಹೇಶ್ ಬಾಬು ಅವರ ಸಿನಿಮಾದ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಹೆಚ್ಚಾಗಿ ಮಾತನಾಡದೆ ಪ್ರಶ್ನೆಗೆ ಮಾತ್ರ ಉತ್ತರ ಕೊಟ್ಟು ಧನ್ಯವಾದಗಳು ತಿಳಿಸಿ, ಕೈ ಮಗಿದು ಹೊರಟು ಬಿಡುತ್ತಾರೆ. ಇನ್ನೂ, ವಿಶೇಷವಾದ ಸಂದರ್ಶನಗಳಂತೂ ಅವರು ನೀಡುವುದೆ ಇಲ್ಲ. ಆದರೆ, ಇದೀಗ 'ಅನ್‌ಸ್ಟಾಪೆಬಲ್ ಬಾಲಯ್ಯ' ಟಾಕ್ ಶೋ ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಹೇಶ್ ಬಾಬು ತಮ್ಮ ಜೀವನದಲ್ಲಿ ಅವರು ಅನುಭವಿಸಿದ ಕಷ್ಟದ ಸಮಯಗಳನ್ನು ಬಾಲಯ್ಯನ ಜತೆಗೆ ಹಂಚಿಕೊಂಡಿದ್ದಾರೆ. ಹೀಗಾಗಿ, ಹೆಚ್ಚು ಮಾತಾಡದ ವ್ಯಕ್ತಿತ್ವವುಳ್ಳ ಮಹೇಶ್ ಏನು ಹೇಳಿರಬಹುದು ಎಂಬ ಕುತೂಹಲ ಹಲವರಿಗಿದೆ.
ಅಂದಹಾಗೆ, ತೆಲುಗಿನ 'ಆಹಾ' ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಬಾಲಯ್ಯನ 'ಅನ್‌ಸ್ಟಾಪೆಬಲ್ ಬಾಲಯ್ಯ' ಟಾಕ್ ಶೋ ನಲ್ಲಿ ಹಲವು ತೆಲುಗಿನ ಸ್ಟಾರ್‌ ನಟರು ಭಾಗಿಯಾಗುತ್ತಿದ್ದಾರೆ. ಕಾರ್ಯಕ್ರಮದಲ್ಲಿ ನಟ ನಂದಮೂರಿ ಬಾಲಕೃಷ್ಣ ಕೇಳುವ ದಿಟ್ಟ ಪ್ರಶ್ನೆಗಳಿಗೆ ಉತ್ತರ ಕೊಡುವುದಲ್ಲದೇ ಅವರ ಜೊತೆ ಆಟಗಳು ಆಡುತ್ತಾರೆ. ನಟ ಮಹೇಶ್ ಬಾಬು ಕೂಡ ಇದೇ ಶೋ ನಲ್ಲಿ ಬಾಲಕೃಷ್ಣ ಅವರ ಜೊತೆ ಮಾತನಾಡಿದ್ದು, ತಮ್ಮ ಕುಟುಂಬದ ಹಲವು ವಿಚಾರಗಳ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ. ಹೀಗೆ, ಸದ್ಯ ಪ್ರಿನ್ಸ್ ಮಾತಾಡಿರುವ ಹಲವು ವಿಚಾರಗಳಲ್ಲಿ ಅತಿ ಹೆಚ್ಚು ಗಮನ ಸೆಳೆದಿರುವುದು ಅವರು ಮಾಡುವತ್ತಿರುವ ಸಮಾಜ ಸೇವೆಗೆ ಕಾರಣವೇನು ಎಂಬ ವಿಚಾರವಾಗಿದೆ.
ಹೌದು, ಪ್ರಿನ್ಸ್ ಮಹೇಶ್ ಇಲ್ಲಿಯವರೆಗೆ ಸಾವಿರಾರು ಸಣ್ಣ ಮಕ್ಕಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ಉಚಿತವಾಗಿ ಕೊಡಿಸುತ್ತಿದ್ದಾರೆ, ಮತ್ತು ಅದನ್ನು ಈಗಲೂ ಮುಂದುವರಿಸುತ್ತಿದ್ದಾರೆ. ಬಡ ಕುಟುಂಬದ ಶಿಶುಗಳ ಜೀವ ಉಳಿಸಲು ಮಹೇಶ್ ತುಂಬಾ ಸಹಾಯ ಮಾಡುತ್ತಿದ್ದಾರೆ. ಮಹೇಶ್ ಮಾಡುವ ಈ ಸಮಾಜ ಸೇವೆಯ ಬಗ್ಗೆ ಪತ್ನಿ ನಟಿ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ನಟ ಮಹೇಶ್​ಗೆ ಏಕೆ ಮಕ್ಕಳ ಆರೋಗ್ಯದ ಬಗ್ಗೆ ಅಷ್ಟೋಂದು ಕಾಳಜಿ ಎಂಬುದನ್ನು ಮಹೇಶ್ ಅವರೆ ಈ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಆ ಕಾರಣ ಕೇಳಿ ಎಲ್ಲರೂ, ಅದರಲ್ಲಯೂ ಮಹೇಶ್ ಬಾಬು ಅವರ ಡೈಹಾರ್ಡ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಜತೆಗೆ, ಖುಷಿ ಪಟ್ಟಿದ್ದಾರೆ.
ಸಮಾಜ ಸೇವೆಯ ಬಗ್ಗೆ ಬಾಲಯ್ಯ ಅವರು ಪ್ರಶ್ನೆ ಕೇಳಿದಾಗ, '' ಗೌತಮ್ ಜನಿಸಿದಾಗ ಅವನಿಗೆ ಒಂದು ಸಮಸ್ಯೆಯಿತ್ತು. ನನ್ನ ಮಗ ಜನಿಸಿದಾಗ, ನನ್ನ ಅಂಗೈನಷ್ಟೆ ಅಗಲ, ಎತ್ತರ ಇದ್ದ. ಹಾಗಾಗಿ, ಗೌತಮ್​ನ ಉಳಿವು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ನನಗೆ ಮತ್ತು ನಮ್ರತಾಗೆ ತುಂಬಾ ನೋವಾಗಿತ್ತು. ನಾವು ಅನುಭವಿಸಿದ ಆತಂಕ ಬೇರೆಯಾರಿಗೂ ಬೇಡ ಅನಿಸುತ್ತೆ. ಆದರೆ, ನಮ್ಮ ಬಳಿ ಹಣವಿತ್ತು. ಎಲ್ಲವೂ ಸರಿ ಹೋಯಿತು . ಇದೀಗ, ಗೌತಮ್ ನನಗಿಂತಾ ಎತ್ತರ ಇದ್ದಾನೆ'' ಎಂದು ಉತ್ತರಿದ್ದಾರೆ ಆಂಧ್ರ ಪ್ರಿನ್ಸ್. ಈ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ಸಣ್ಣ ವಿಡಿಯೋಗಳ ರೂಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 
ನಟ ಮಹೇಶ್ ತಮ್ಮ ಮಾತನ್ನು ಮುಂದುವರಿಸುತ್ತಾ, 'ನನ್ನ ಬಳಿ ಹಣವಿತ್ತು. ಹಾಗಾಗಿ, ಎಲ್ಲವೂ ಸರಿ ಹೋಯಿತು. ಆದರೆ, ಬೇರೆ ಎಲ್ಲರ ಬಳಿ ಹಣ ಇರುವುದಿಲ್ಲ. ಅವರ ಗತಿ ಏನು? ಬಡವರನ್ನು ನೆನೆಸಿಕೊಂಡರೆ ತುಂಬಾ ಬೇಜಾರಾಗುತ್ತೆ. ಮಕ್ಕಳು ಎಲ್ಲರಿಗೂ ಮಕ್ಕಳೇ. ಅದು, ನಾವಾದರೂ ಅಷ್ಟೆ, ಅಥವಾ ಬಡವರು ಆದರೂ ಅಷ್ಟೆ. ಹಾಗಾಗಿ, ನನಗೆ ಆದಷ್ಟು ಸಹಾಯ ನಾನು ಮಾಡುತ್ತಿದ್ದೇನೆ', ಎಂದಿದ್ದಾರೆ ಮಹೇಶ್. ಮತ್ತೊಂದು ಪ್ರಶ್ನೆಗೆ, 'ಮಹೇಶ್ ಬಾಬು, ತನ್ನ ಮಕ್ಕಳಿಗೆ ಅಪ್ಪ ಅಷ್ಟೆ. ಸೂಪರ್ ಸ್ಟಾರ್ ಅಲ್ಲ. ಹಾಗೆಯೇ, ಇರಲು ತುಂಬಾ ಇಷ್ಟ', ಎಂದು ಹೇಳುತ್ತಾ ಮತ್ತೊಮ್ಮೆ ನಟ ಮಹೇಶ್ ಅವರು ಎಷ್ಟು ಸರಳ ವ್ಯಕ್ತಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.