ದಕ್ಷಿಣ ಚಿತ್ರರಂಗದಲ್ಲಿ ಸ್ಟಾರ್ ನಟರ ಅಭಿಮಾನಿಗಳ ಕಿತ್ತಾಟ ತುಂಬಾ ಕಾಮನ್. ಇನ್ನು, ಇತ್ತೀಚೆಗೆ ಸೋಶಿಯಲ್ ಮೀಡಿಯಾದಿಂದ ಇಂತಹ ಅಭಿಮಾನಿಗಳ ವಾರ್ಗಳು ತುಂಬಾ ಹೆಚ್ಚಾಗಿಯೆ ನಡೆಯುತ್ತಿವೆ. ಸದ್ಯ, ಟಾಲಿವುಡ್ ಪ್ರಿನ್ಸ್, ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಹಾಗೂ ಕಾಲಿವುಡ್ನ ದಳಪತಿ ವಿಜಯ್ ಅವರ ಅಭಿಮಾನಿಗಳ ಮಧ್ಯೆ ದೊಡ್ಡ ಮಟ್ಟದಲ್ಲಿ ವಾರ್ ನಡೆಯುತ್ತಿದೆ. ಹೌದು, ಎರಡೂ ನಟರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಒಂದು ರೇಂಜ್ಗೆ ಕಿತ್ತಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ತಾರಕಕ್ಕೆ ಹೋದರು ಅಚ್ಚರಿ ಏನಿಲ್ಲ. ಅಂದಹಾಗೆ, ಯಾವ ಕಾರಣಕ್ಕೆ ಕಿತ್ತಾಡುತ್ತಿದ್ದಾರೆ ಅಂತೀರಾ? ಇದು ಫೆಬ್ರವರಿ ತಿಂಗಳು. ಪ್ರೀತಿಯ ತಿಂಗಳು. ಮತ್ತೊಂದೆಡೆ, ನಟ ಮಹೇಶ್ ಬಾಬು ಹಾಗೂ ವಿಜಯ್ ಅವರ ಎರಡು ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ. ಹೌದು, ಹೊಸ ವರ್ಷದ ಪ್ರಯುಕ್ತ ‘ಬೀಸ್ಟ್’ ಸಿನಿಮಾ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿತ್ತು. ಈ ಪೋಸ್ಟರ್ನಲ್ಲಿ ಏಪ್ರಿಲ್ನಲ್ಲಿ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಬಗ್ಗೆ ತಂಡ ಮಾಹಿತಿ ನೀಡಿತ್ತು. ಆದರೆ, ರಿಲೀಸ್ ದಿನಾಂಕ ಇನ್ನೂ ಘೋಷಣೆ ಆಗಿಲ್ಲ.
ಹೀಗಿದ್ದರೂ, ‘ಬೀಸ್ಟ್’ ಸಿನಿಮಾ ಏಪ್ರಿಲ್ 14ರಂದು ತೆರೆಗಪ್ಪಳಿಸುವ ನಿರೀಕ್ಷೆ ಇದೆ. ಇನ್ನು, ನಟ ಮಹೇಶ್ ಬಾಬು ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರತಂಡ ಕೂಡಾ ಬಿಡುಗಡೆ ದಿನಾಂಕವನ್ನು ಮೇ 12 ಎಂದು ಘೋಷಿಸಿದೆ. ಹೀಗಿರುವಾಗ, ಸಹಜವಾಗಿಯೇ ಕಾಂಪಿಟಿಷನ್ ಮನೋಭಾವ ಎಲ್ಲರಲ್ಲಿ ಮೂಡುತ್ತೆ. ಅಂತಹದ್ದರಲ್ಲಿ, ಈ ಎರಡೂ ಚಿತ್ರಗಳ ಒಂದು ಪ್ರೀತಿಯ ಸಾಂಗ್ ಫೆಬ್ರವರಿ 14ರಂದು, ಅಂದರೆ ಒಂದೇ ದಿನ ಎರಡು ಹಾಡುಗಳು ರಿಲೀಸ್ ಆಗುತ್ತಿದೆ ಎಂದರೆ ಸಹಜವಾಗಿಯೇ ಅಭಿಮಾನಿಗಳು ಕೋಪಗೊಂಡಿದ್ದಾರೆ.
ಒಂದೇ ದಿನ ಎರಡು ಚಿತ್ರಗಳ ಸಾಂಗ್ ರಿಲೀಸ್ ಆಗುತ್ತಿರುವುದಕ್ಕೆ ಅಭಿಮಾನಿಗಳು ಸಂಭ್ರಮಿಸಬಹುದಿತ್ತು. ಆದರೆ, ಹಾಗೆ ಮಾಡದ ಅಭಿಮಾನಿಗಳು ಕಿತ್ತಾಡುತ್ತಿದ್ದಾರೆ. ಇಂತಹ ಸಿಲ್ಲಿ ಕಾರಣಕ್ಕೆ ಕಿತ್ತಾಟ ನಡೆಯುತ್ತಿರುವ ಬಗ್ಗೆ ಕೆಲವರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ. ‘ಯೂಟ್ಯೂಬ್ನಲ್ಲಿ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಳ್ಳಲು ವಿಜಯ್ ಅಭಿಮಾನಿಗಳು ಕಳ್ಳ ಹಾದಿ ಹಿಡಿಯುತ್ತಾರೆ’ ಎಂದು ಮಹೇಶ್ ಅಭಿಮಾನಿಗಳು ದೂರಿದ್ದಾರೆ. ಇದಕ್ಕೆ, ವಿಜಯ್ ಅಭಿಮಾನಿಗಳು ಕೂಡಾ ‘ಸರ್ಕಾರಿ ವಾರು ಪಾಟ’ ಚಿತ್ರದ ಬಗ್ಗೆ, ಮಹೇಶ್ ಅಭಿಮಾನಿಗಳನ್ನು ಟೀಕಿಸಿದ್ದಾರೆ.