Pushpa 2 : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ಡಿ.05 ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದು 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.
ತಾಜಾ ಸಂಗತಿ ಏನೆಂದರೆ, ಮಹಾರಾಷ್ಟ್ರದ ನಾಗ್ಪುರದಲ್ಲಿ ಕಳೆದ ಗುರುವಾರ ನಡೆದ ಪುಷ್ಪ 2 ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ವಿಶಾಲ್ ಮೆಶ್ರಾಮ್ ಎಂಬ ಡ್ರಗ್ ಸ್ಮಗ್ಲರ್ ಮತ್ತು ಮೋಸ್ಟ್ ವಾಂಟೆಡ್ ದರೋಡೆಕೋರನನ್ನು ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಮಧ್ಯರಾತ್ರಿಯಲ್ಲಿ ನಡೆದ ಈ ಬಂಧನವು ಸಿನಿ ವೀಕ್ಷಕರನ್ನು ಒಂದು ಕ್ಷಣ ಹುಬ್ಬೇರುವಂತೆ ಮಾಡಿತು. ದಿಢೀರನೇ ಪೊಲೀಸರು ಚಿತ್ರಮಂದಿರದ ಒಳಗೆ ನುಗ್ಗಿದ್ದರಿಂದ ಪ್ರೇಕ್ಷಕರು ಕೂಡ ಗೊಂದಲಕ್ಕೆ ಒಳಗಾದರು. ಕೊನೆಗೆ ಪೊಲೀಸರು ಆರೋಪಿ ಮೆಶ್ರಮ್‌ನನ್ನು ಕಸ್ಟಡಿಗೆ ತೆಗೆದುಕೊಂಡರು. ಅಲ್ಲದೆ, ಚಲನಚಿತ್ರ ವೀಕ್ಷಿಸುವುದನ್ನು ಮುಂದುವರಿಸಬಹುದು ಎಂದು ಪ್ರೇಕ್ಷಕರಿಗೆ ಭರವಸೆ ನೀಡಿ, ಮೆಶ್ರಮ್‌ನನ್ನು ಕರೆದುಕೊಂಡು ಅಲ್ಲಿಂದ ಹೊರಟರು.
ಸುಮಾರು 10 ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಮೆಶ್ರಾಮ್ 27 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ. ಆತ ಮೇಲಿರುವ ಆರೋಪಗಳಲ್ಲಿ ಎರಡು ಕೊಲೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಪೊಲೀಸ್ ಅಧಿಕಾರಿಗಳ ಮೇಲಿನ ದಾಳಿಗಳು ಕೂಡ ಸೇರಿವೆ. ಪುಷ್ಪ 2 ಸಿನಿಮಾ ನೋಡಲು ಮೆಶ್ರಮ್ ಬರುತ್ತಾನೆಂಬ ಮಾಹಿತಿ ಪೊಲೀಸ್ ಅಧಿಕಾರಿಗಳಿಗೆ ಮೊದಲೇ ತಿಳಿದಿತ್ತು. ಬಳಿಕ ಚಿತ್ರಮಂದಿರಕ್ಕೆ ನುಗ್ಗಿದ ಪೊಲೀಸರು ಮೆಶ್ರಮ್‌ನನ್ನು ಬಂಧಿಸಿದ್ದಾರೆ.
ಪುಷ್ಪ ಚಿತ್ರದ ಬಿಡುಗಡೆಯು ದರೋಡೆಕೋರರನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರವಾಯಿತು. ಸೈಬರ್ ಕಣ್ಗಾವಲು ಬಳಸಿ, ಪೊಲೀಸರು ಚಿತ್ರಮಂದಿರದ ಹೊರಗೆ ನಿಲ್ಲಿಸಲಾಗಿದ್ದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಮೂಲಕ ಆತನ ಸ್ಥಳವನ್ನು ಪತ್ತೆಹಚ್ಚಿದರು. ಮೆಶ್ರಾಮ್ ಪರಾರಿಯಾಗುವುದನ್ನು ತಡೆಯಲು ಪೊಲೀಸರು ಮೊದಲು ಆತನ ವಾಹನದ ಟೈರ್‌ಗಳಲ್ಲಿ ಗಾಳಿ ತೆಗೆದರು. ಚಿತ್ರವು ಕ್ಲೈಮ್ಯಾಕ್ಸ್ ತಲುಪುತ್ತಿದ್ದಂತೆ, ಅಧಿಕಾರಿಗಳು ಚಿತ್ರಮಂದಿರಕ್ಕೆ ಪ್ರವೇಶಿಸಿದರು ಮತ್ತು ಮೆಶ್ರಮ್ ಸುತ್ತುವರಿದು ಬಂಧಿಸಿದರು. (ಏಜೆನ್ಸೀಸ್)