ಚೆನ್ನೈ: ಸಿನಿಮಾ ಇಂಡಸ್ಟ್ರಿಯಲ್ಲಿ ರೀಮೇಕ್ ಸಿನಿಮಾಗಳು ಹೊಸದೇನಲ್ಲ. ಈ ಹಿಂದೆ ಅವುಗಳ ಸಂಖ್ಯೆ ಜಾಸ್ತಿ ಇತ್ತು. ಆದರೆ, ಪ್ಯಾನ್ ಇಂಡಿಯಾ ಪರಿಕಲ್ಪನೆ ಬಂದ ಬಳಿಕ ರೀಮೇಕ್ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ, ಬೆರಳಣಿಕೆಯಷ್ಟು ರೀಮೇಕ್ ಸಿನಿಮಾಗಳು ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ಅಕ್ಷಯ್ ಕುಮಾರ್ ನಟನೆಯ ಸರ್ಫಿರಾ ಸಿನಿಮಾ ಬಿಡುಗಡೆಯಾಯಿತು. ಇದು ತಮಿಳಿನ ಸೂಪರ್ ಹಿಟ್ಸೂರರೈ ಪೋಟ್ರು ಸಿನಿಮಾದ ರೀಮೇಕ್. ಇದೀಗ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ರೀಮೇಕ್ಗೆ ರೆಡಿಯಾಗಿದೆ.
ಯಾವುದೇ ಸಿನಿಮಾ ಸೂಪರ್ ಡೂಪರ್ ಹಿಟ್ ಆದರೆ, ಆ ಸಿನಿಮಾದ ರಿಮೇಕ್ ಅವತರಣಿಕೆ ಬೇರೆ ಭಾಷೆಯಲ್ಲಿ ಬರುವುದು ಖಂಡಿತ. ಇದೀಗ ಈ ರಿಮೇಕ್ ಪಟ್ಟಿಗೆ ಇತ್ತೀಚೆಗಷ್ಟೇ ಸಂಚಲನ ಸೃಷ್ಟಿಸಿದ ಮಹಾರಾಜ ಚಿತ್ರವೂ ಸೇರ್ಪಡೆಯಾಗಿದೆ. ಯಾವುದೇ ನಿರೀಕ್ಷೆಗಳಿಲ್ಲದೆ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಬಳಿಕ ಎಲ್ಲೆಡೆ ಮೆಚ್ಚುಗೆ ಪಡೆಯಿತು. ಅದರಲ್ಲೂ ಒಟಿಟಿ ಸ್ಟ್ರೀಮಿಂಗ್‌ಗೆ ಬಂದ ನಂತರ, ಈ ಚಿತ್ರದ ಖ್ಯಾತಿ ಮತ್ತೊಂದು ಹಂತಕ್ಕೆ ಹೋಯಿತು. ಇದೀಗ ಈ ಸಿನಿಮಾವನ್ನು ಬಾಲಿವುಡ್ನ ಖ್ಯಾತ ನಟರೊಬ್ಬರು ರಿಮೇಕ್ ಮಾಡಲು ಮುಂದಾಗಿದ್ದಾರೆ.
ವಿಜಯ್ ಸೇತುಪತಿ ಅವರ ವೃತ್ತಿಜೀವನದ 50ನೇ ಚಿತ್ರವಾದ ಮಹಾರಾಜ ಚಿತ್ರವು ವಿಮರ್ಶಕರಿಂದ ಪ್ರಶಂಸೆ ಗಳಿಸಿದೆ. ಕೇವಲ 20 ಕೋಟಿ ರೂಪಾಯಿಯಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಚಿತ್ರ ವಿಜಯ್ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಚಿತ್ರವಾಗಿ ನಿಂತಿದೆ. ಚಿತ್ರಕಥೆ, ಪ್ರತಿ ಕಲಾವಿದರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೀಗ ಈ ಸಿನಿಮಾವನ್ನು ಬಾಲಿವುಡ್ ಸ್ಟಾರ್ ಹೀರೋ ಆಮೀರ್ ಖಾನ್ ರಿಮೇಕ್ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಚಿತ್ರದ ಹಿಂದಿ ಹಕ್ಕುಗಳನ್ನು ಆಮೀರ್ ಖಾನ್ ಈಗಾಗಲೇ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ತಯಾರಕರು ಇದಕ್ಕೆ ಸಂಬಂಧಿಸಿದ ಅಪ್ಡೇಟ್ಗಳನ್ನು ಅಧಿಕೃತವಾಗಿ ಪ್ರಕಟಿಸುತ್ತಾರೆಂದು ಹೇಳಲಾಗುತ್ತಿದೆ.
ಅಮೀರ್ ಖಾನ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಅವರು ಕಾಲಕಾಲಕ್ಕೆ ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಾರೆ. ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಮೀರ್ ಸದಾ ಮುಂದು. ಈಗಾಗಲೇ ದಂಗಲ್ ಸಿನಿಮಾದ ಮೂಲಕ ವಿಶ್ವದೆಲ್ಲೆಡೆ ಹೆಚ್ಚು ಕಲೆಕ್ಷನ್ ಮಾಡಿ ಯಶಸ್ಸು ಕಂಡಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಆಮೀರ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದ್ದು, ಒಂದು ವೇಳೆ ಮಹಾರಾಜ ಸಿನಿಮಾವನ್ನು ರಿಮೇಕ್ ಮಾಡಿದ್ದೇ ಆದಲ್ಲಿ ಅದು ಕೂಡ ಹಿಟ್ ಆಗುವ ಸಾಧ್ಯತೆ ಇದೆ. (ಏಜೆನ್ಸೀಸ್)