'ಇಕ್ಕಟ್' ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಪಡೆದ ನಟ ನಾಗಭೂಷಣ್ ಅಭಿನಯಿಸಿರುವ 'ಮೇಡ್ ಇನ್ ಚೈನಾ' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ. ಲಾಕ್ ಡೌನ್ ಟೈಮ್ ನಲ್ಲಿ ವಿದೇಶದಲ್ಲಿ ಲಾಕ್ ಆಗುವ ಪತಿ, ಸ್ವದೇಶಿ ನೆಲದಲ್ಲಿ ಪತ್ನಿಯ ನಡುವಿನ ಪ್ರೀತಿ ಹಾಗೂ ಜಗಳವೇ ಈ 'ಮೇಡ್ ಇನ್ ಚೈನಾ' ಸಿನಿಮಾ ಕಥೆ ಎಂದು ಟೀಸರ್ ನೋಡಿದವರಿಗೆ ಗೊತ್ತಾಗುತ್ತೆ. ನಟ ನಾಗಭೂಷಣ್ ಈ ಸಿನಿಮಾದಲ್ಲಿ ನಟಿಸಿದ್ದಾರೆ ಅಂದರೆ ಈ ಚಿತ್ರದಲ್ಲಿ ಕಾಮಿಡಿಗೆ ಯಾವುದೇ ಕೊರತೇ ಇರೋದಿಲ್ಲ ಎಂಬುದು ಗೊತ್ತೇ ಇದೆ. ಇನ್ನು, ಈ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಅದು ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಅದ್ಭುತ ನಟನೆ. ಟೀಸರ್ನಲ್ಲಿ ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಪಾತ್ರ ಮತ್ತು ನಟನೆ ಸದ್ಯ ಎಲ್ಲರ ಗಮನಸೆಳೆಯುತ್ತಿದೆ.
ಹೌದು, ಗಂಡ-ಹೆಂಡತಿ ಪಾತ್ರಗಳಲ್ಲಿ ಅಂದರೆ ನಾಯಕನ ಪಾತ್ರದಲ್ಲಿ ನಟ ನಾಗಭೂಷಣ್ ಹಾಗೂ ನಾಯಕಿಯ ಪಾತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ಬೆಳ್ಳಿ ತೆರೆಯ ಮೇಲೆ ಸಿಕ್ಕಾಪಟ್ಟೆ ಮಿಂಚಲಿದ್ದಾರೆ. ಇನ್ನು, ಈ 'ಮೇಡ್ ಇನ್ ಚೈನಾ' ಸಿನಿಮಾ ಕನ್ನಡದಲ್ಲಿ ಮೊದಲ ವರ್ಚುವಲ್ ಸಿನಿಮಾ ಆಗಿದೆ. ಈ ಚಿತ್ರಕ್ಕೆ ಖ್ಯಾತ ಸಿನಿಮಾಟೋಗ್ರಾಫರ್ ಪ್ರೀತಮ್ ತೆಗ್ಗಿನಮನೆ ಕೇವಲ ಸಿನಿಮಾಟೋಗ್ರಾಫಿ ಮಾಡುವುದಲ್ಲದೇ ಚಿತ್ರಕ್ಕೆ ನಿರ್ದೇಶನ, ಗ್ರಾಫಿಕ್, ಎಡಿಟಿಂಗ್ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್. ಹೀಗೆ ಮುಂತಾದವರು ಈ ಚಿತ್ರದಲ್ಲಿ ಬೇರೆ ಬೇರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಅವರು ಕಥೆ ಬರೆದಿದ್ದು, ವೀವಾನ್ ರಾಧಾಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ.